ಪುತ್ತೂರು: ಸಂತ ಫಿಲೋಮಿನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಬಿಳಿಯೂರು ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ.ಆ್ಯಂಟನಿಪ್ರಕಾಶ್ ಮೊಂತೇರೊ ಮಾತನಾಡಿ, ಈ ರೀತಿಯ ಶಿಬಿರಗಳಲ್ಲಿ ದೊರೆಯುವ ಜೀವನಾನುಭವ ಅಮೂಲ್ಯವಾದುದು. ನಾವು ಮಾಡುತ್ತಿರುವ ಕೆಲಸವು ಎಷ್ಟೇ ಚಿಕ್ಕದಾಗಿದ್ದರೂ ಅದು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಕಾರ್ಯವಾಗಿದೆ. ಒಂದು ಪುಟ್ಟ ಸಹಾಯ ಇನ್ನೊಬ್ಬರಲ್ಲೆ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡಿದಲ್ಲಿ ನಮ್ಮ ಕರ್ತವ್ಯವನ್ನು ನಾವು ಯಶಸ್ವಿಯಾಗಿ ನೆರವೇರಿಸಿದ್ದೇವೆಂದು ಅರ್ಥ. ಈ ಶಿಬಿರದ ಮೂಲಕ ವಿದ್ಯಾರ್ಥಿಗಳು ಪರಸ್ಪರರನ್ನು ಅರ್ಥಮಾಡಿಕೊಡುವುದಲ್ಲದೆ ಇತರರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಂಡಿದ್ದಲ್ಲಿ ಶಿಬಿರದ ಉದ್ದೇಶ ಈಡೇರಿದಂತಾಗಿದೆ ಎಂದರು.
ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಗೌಡ ಸಮಾರಂಭ ಭಾಷಣ ಮಾಡಿ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಾರ್ಷಿಕ ವಿಶೇಷ ಶಿಬಿರದ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಬಿಳಿಯೂರಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಧನ್ಯ ಕುಮಾರ್, ಸದಸ್ಯರಾದ ಗಣೇಶ್ ರಾಜ್, ಹೊನ್ನಪ್ಪ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಶೀಲಾ ಡಯಾನ ಮೊರಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧನ್ಯಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಶಿಬಿರಾಧಿಕಾರಿಗಳಾದ ಪುಷ್ಪ ಎನ್. ಸ್ವಾಗತಿಸಿ, ವಾಸುದೇವ ಎನ್. ವಂದಿಸಿದರು. ಸಹಶಿಬಿರಾಧಿಕಾರಿ ಚೈತ್ರ ದಾನಿಗಳ ವಿವರವನ್ನು ಓದಿದರು. ಧನ್ಯ.ಪಿ.ಟಿ ಕಾರ್ಯಕ್ರಮ ನಿರೂಪಸಿದರು.