ಪುತ್ತೂರು: ಹೊಸ ಹೊಸ ತಂತ್ರಜ್ಞಾನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದರ ಆಶಯಗಳು ಸಾಕಾರವಾಗುತ್ತದೆ. ಅದಕ್ಕಾಗಿ ಯುವ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ರಾಯಭಾರಿಗಳಾಗಬೇಕು ಎಂದು ಮೈಸೂರಿನ ಎಸ್ ಡಿ ಎಂ ರೀಸರ್ಚ್ ಸೆಂಟರ್ ಫಾರ್ ಮೆನೇಜ್ಮೆಂಟ್ ಸ್ಟಡೀಸ್ ಅಧ್ಯಕ್ಷ ಡಾ.ವೆಂಕಟ್ರಾಜ್.ಬಿ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕೋತ್ಸವ ವಿಬ್ ಜಯಾರ್-2024 ಸಮಾರಂಭದ ಮುಖ್ಯ ಅತಿಥಿಯಾಗಿ ಮಾತಾಡಿದರು.

ಶಿಕ್ಷಣ ನೀಡುವ ಸಂಸ್ಥೆಗಳು ಸಾಕಷ್ಟಿವೆ. ಆದರೆ ಜೀವನಾನುಭವಗಳನ್ನು, ಸಂಸ್ಕೃತಿ, ಉದ್ದೇಶ, ರಾಷ್ಟ್ರ ಚಿಂತನೆಗಳನ್ನು ತಿಳಿಸುವ ಶಿಕ್ಷಣ ವ್ಯವಸ್ಥೆ ಇಂದಿನ ಆವಶ್ಯಕತೆ ಎಂದರು. ತಮ್ಮ ಯೋಚನೆಗಳನ್ನು ಯೋಜನೆಗಳಾಗಿಸಿ ಅದಕ್ಕೊಂದು ಮೂರ್ತರೂಪ ಕೊಟ್ಟು ಅದನ್ನು ಒಂದು ಉತ್ಪನ್ನವಾಗಿಸಿ ಸಮಾಜದ ಒಳಿತಿಗಾಗಿ ಶ್ರಮಿಸುವ ಜವಾಬ್ಧಾರಿ ನಿಮ್ಮ ಮೇಲಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಪಿ. ಮಾತನಾಡಿ, ಕರಾವಳಿ ಭಾಗದ ಹೆಸರಾಂತ ಕಾಲೇಜಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆಯು ಕಲಿಕೆಯ ಜತೆಗೆ ಕ್ರೀಡೆ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಶ್ರೇಷ್ಟ ನಿರ್ವಹಣೆಯನ್ನು ನೀಡುತ್ತಿದ್ದು ಅತ್ಯುತ್ತಮ ಸವಲತ್ತುಗಳನ್ನು ಹೊಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ದೇಶದ ಧರ್ಮ, ಸಂಸ್ಕೃತಿ, ಆದರ್ಶಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಪೌರಾಣಿಕ ಪ್ರಸಂಗಗಳನ್ನು ನೆನಪು ಮಾಡಿಕೊಳ್ಳುವ ಆವಶ್ಯಕತೆ ಇದೆ ಎಂದು ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಸಮಗ್ರ ತಂಡ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳ ತಂಡವನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶೈಕ್ಷಣಿಕವಾಗಿ ಪ್ರತಿ ವಿಭಾಗದಲ್ಲಿಯೂ ಅತ್ಯುತ್ತಮ ಸಾಧನೆಯನ್ನು ತೋರಿದ ಪ್ರತಿಭಾವಂತರಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅನನ್ಯ ಸಾಧನೆಯನ್ನು ಮಾಡಿದ ಸಾಧಕರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಥಮ ವರ್ಷದ ಡೇಟಾ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಶರಣಮ್ಮ ನೀಲಪ್ಪ ಮಡಿವಾಳರ್ ಬರೆದಿರುವ ಅಂತರಾಳದ ಭಾವ ಎನ್ನುವ ಕವನ ಸಂಕಲನವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಡಾ.ಯಶೋಧಾ ರಾಮಚಂದ್ರ, ಸಂತೋಶ್ ಕುತ್ತಮೊಟ್ಟೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವಾರ್ಷಿಕ ವರದಿ ಮಂಡಿಸಿದರು. ನಿವೇತಾ ಸ್ವಾಗತಿಸಿ, ಜೀವಿತ್ ಎಸ್. ವಂದಿಸಿದರು. ರಚನಾ ಎಂ.ಎಸ್., ವಿದಿಶಾ ಕಾರ್ಯಕ್ರಮ ನಿರ್ವಹಿಸಿದರು.