ಬೆಂಗಳೂರು : ವಿನಯ ಪಂಪಾಪತಿ ಮತ್ತು ವಿಕಾಸ ಪಂಪಾಪತಿ ನಿರ್ದೇಶನದ ಹಾಗೂ ಅಮ್ರೆಜ್ ಸೂರ್ಯವಂಶಿ ನಿರ್ಮಾಣದ ‘ರಾಮನ ಅವತಾರ’ಕನ್ನಡ ಚಲನಚಿತ್ರ ಮೇ 10 ರಂದು ಬಿಡುಗಡೆಗೊಳ್ಳಲಿದ್ದು ಅದರ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಲನಚಿತ್ರದಲ್ಲಿ ಕೋಟ್ಯಾಂತರ ಹಿಂದೂಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ ಮಾಡಲಾಗಿದೆ. ಆದ್ದರಿಂದ ಸಿನಿಮಾದ ಹೆಸರನ್ನು ಬದಲಾಯಿಸಬೇಕು ಮತ್ತು ಅದರಲ್ಲಿನ ರಾಮಾಯಣದ ಅಪಮಾನಾತ್ಮಕ ಸನ್ನಿವೇಶಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಎನ್. ಎಮ್ ಸುರೇಶ್ ರಿಗೆ ಮನವಿ ನೀಡಿದ್ದಾರೆ
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ನೀಲೇಶ್ವರ, ನಿರಂಜನ ನಾರಾಯಣಕರ, ಪ್ರಶಾಂತ್ ದಾಸರಹಳ್ಳಿ, ರಾಷ್ಟ್ರೀಯ ಹಿಂದೂ ಪರಿಷತ್ ನ ರಾಜ್ಯಾಧ್ಯಕ್ಷ ಸುರೇಶ್ ಗೌಡ, ನಗರ ಜಿಲ್ಲಾಧ್ಯಕ್ಷ ವಿಕ್ರಂ ಶೆಟ್ಟಿ ಉಪಸ್ಥಿತರಿದ್ದರು.
ರಾಮ ಹೆಸರಿನ ಚಿತ್ರ ನಾಯಕ ಯಾವ ಊರಿನ ಜನ ನನ್ನನ್ನು ಊರಿಂದ ಹೊರಗೆ ತಳ್ಳಿದರು ಅದೇ ಜನ ನನಗೆ ಗೌರವ ಕೊಡುವ ತನಕ ನಾನು ಇಲ್ಲೇ ಎಲ್ಲಾದರೂ ರಸ್ತೆಯಲ್ಲಿ ಕಾಲ ಕಳೆಯುತ್ತೇನೆ ಎನ್ನುತ್ತಾನೆ. ಇದು ರಾಮಾಯಣ ಧರ್ಮಗ್ರಂಥಕ್ಕೆ ಮಾಡಿದ ಘೋರ ಅಪಮಾನ !, ಚಿತ್ರನಟ ರಾಮನ ಹೆಸರಿನಲ್ಲಿ ಚುನಾವಣೆಗೆ ನಿಂತಿರುತ್ತಾನೆ. ಯಾರ ಮನೆ ಮುಂದೆ ಕಸ ಇದ್ದರೆ ರಾಮನಿಗೆ ಕಾಲ್ ಮಾಡಿ ಎಂದು ಕರೆ ನೀಡಲಾಗುತ್ತದೆ, ಚಿತ್ರ ನಾಯಕಿ ರಾಮಾಯಣದಂತೆ ರಾಮ ನನನ್ನು ಜಿಂಕೆಯ ಚಿತ್ರವಿರುವ ಕಾರಿನ ಹಿಂದೆ ಓಡಿಸಿ ನಂತರ ಅವಳನ್ನು ಕಿಡ್ನಾಪ್ ಮಾಡುತ್ತಿರುವಂತೆ ತೋರಿಸಲಾಗಿದೆ, ರಾಮನ ವೇಷದಲ್ಲಿ ಚಿತ್ರದ ನಾಯಕ ಖಳನಾಯಕರೊಂದಿಗೆ ಫೈಟಿಂಗ್ ಮಾಡುತ್ತಿರುವಂತೆ ತೋರಿಸಲಾಗಿದೆ.
ಕಾಮಿಡಿ ಚಿತ್ರ ಮಾಡುವ ಗೀಳಿನಲ್ಲಿ ಪವಿತ್ರ ರಾಮಾಯಣ ಮತ್ತು ಪ್ರಭು ಶ್ರೀರಾಮನ ಘೋರ ಅಪಮಾನ : ಶರತ್ ಕುಮಾರ್
ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಪ್ರತಿಕ್ರಿಯಿಸಿ, ಇಂದು ಕೇವಲ ಭಾರತ ಸೇರಿ ವಿಶ್ವಾದ್ಯಂತ ಪ್ರಭು ಶ್ರೀರಾಮನನ್ನು ಪೂಜಿಸಲಾಗುತ್ತಿದೆ. ಪ್ರಭು ಶ್ರೀರಾಮನಿಗಾಗಿ ಸಾವಿರಾರು ಹಿಂದೂಗಳು ತಮ್ಮ ಪ್ರಾಣತ್ಯಾಗ ಮಾಡಿ ಭವ್ಯ ರಾಮಮಂದಿರ ಕಟ್ಟಿದ್ದಾರೆ. ಹೀಗಿರುವಾಗ ಈ ಚಿತ್ರದಲ್ಲಿ ಶ್ರೀರಾಮನ ವೇಷವನ್ನು ನಾಯಕನಿಗೆ ತೊಡಿಸಿ ಪೊಲೀಸರು ಶ್ರೀರಾಮನನ್ನು ಅಟ್ಟಾಡಿಸುವಂತೆ ತೋರಿಸಲಾಗಿದೆ. ಕಾಮಿಡಿ ಚಿತ್ರ ಮಾಡುವ ಗೀಳಿನಲ್ಲಿ ಪವಿತ್ರ ರಾಮಾಯಣ ಮತ್ತು ಪ್ರಭು ಶ್ರೀರಾಮನ ಘೋರ ಅಪಮಾನ ಮಾಡಿರುವುದು ಕಂಡುಬರುತ್ತದೆ, ಈ ಹಿಂದೆ ಇದೇ ಕಾರಣಕ್ಕೆ ಈ ಚಲನಚಿತ್ರ ಬಿಡುಗಡೆಯಾಗಲು ವಿರೋಧ ವ್ಯಕ್ತವಾಗಿತ್ತು, ಆದರೆ ಚಿತ್ರದಲ್ಲಿ ಬದಲಾವಣೆಗಳನ್ನು ಮಾಡಿರುವಂತೆ ಕಂಡರೂ ಚಿತ್ರದ ಹೆಸರು ಮತ್ತು ಅದರಲ್ಲಿನ ತುಣಕುಗಳಲ್ಲಿ ಇನ್ನೂ ರಾಮನ ಅಪಮಾನ ಎದ್ದು ಕಾಣಿಸುತ್ತಿದೆ, ಕಾಮಿಡಿ ಚಿತ್ರ ರಚಿಸುವ ಉದ್ದೇಶವಿದ್ದಿದ್ದರೆ ‘ರಾಮನ ಅವತಾರ’ಎಂದೇ ಏಕೆ ಹೆಸರಿಡಬೇಕಿತ್ತು ? ಇತರ ಪಂಥೀಯರ ಶ್ರದ್ಧಾಸ್ಥಾನಗಳ ಮೇಲೆ ಈ ರೀತಿಯ ಕಾಮಿಡಿ ಚಿತ್ರ ರಚಿಸುವ ಧೈರ್ಯ ತೋರುವರೆ ? ಕೀಳುಮಟ್ಟದ ಸಿನಿಮಾ ಪ್ರಚಾರಕ್ಕಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗಿದೆ. ಇದು ಭಾರತೀಯ ದಂಡ ಸಂಹಿತೆ 295, 298 ಮತ್ತು 295 A ಪ್ರಕಾರ ಗಂಭೀರ ಅಪರಾಧವಾಗಿದೆ. ಅದಲ್ಲದೇ ಸಿನಿಮಾಟೋಗ್ರಾಫ್ ಆಕ್ಟ್ 1952 ನ ಕಲಂ 5 B ಪ್ರಕಾರ ಇದು ಸೆನ್ಸಾರ್ ಮಂಡಳಿ ನಿಯಮದ ಉಲ್ಲಂಘನೆಯಾಗಿದೆ. ದೇಶದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಸಿನಿಮಾ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವುದು ನೀತಿ ಸಂಹಿತೆ ಉಲ್ಲಂಘನೆ ಆಗಿದೆ, ಈ ಚಿತ್ರದ ಸೆನ್ಸಾರ್ ಪ್ರಮಾಣ ಪತ್ರ ರದ್ದುಗೊಳಿಸದಿದ್ದರೆ ರಾಜ್ಯಾದ್ಯಂತ ಆಂದೋಲನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.