ಆಯೋಧ್ಯೆ: ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಛತ್ತೀಸ್‌ಗಢ ಕಾಂಗ್ರೆಸ್ ನಾಯಕಿ ರಾಧಿಕಾ ಖೇರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
ನಾನು ರಾಮಮಂದಿರಕ್ಕೆ ಭೇಟಿ ನೀಡಿದ ಬಳಿಕ ಪಕ್ಷದಲ್ಲೇ ಟೀಕೆ ಮಾಡಲಾಗುತ್ತಿದೆ. ಜತೆಗೆ ಪಕ್ಷದಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂಬುದಾಗಿ ರಾಧಿಕಾ ಖೇರ ತಿಳಿಸಿದ್ದಾರೆ.
ಪ್ರತಿಯೊಬ್ಬ ಹಿಂದೂವಿಗೂ ರಾಮಮಂದಿರವು ಪವಿತ್ರ ಹಾಗೂ ಶ್ರದ್ಧಾ ಕೇಂದ್ರವಾಗಿದೆ. ಹಾಗಾಗಿ ನಾನು ರಾಮಮಂದಿರಕ್ಕೆ ಭೇಟಿ ನೀಡಿದೆ. ನಾನು ಕಾಂಗ್ರೆಸ್‌ಗೆ 22 ವರ್ಷದ ನಿಷ್ಠಾವಂತಳಾಗಿ ದುಡಿದಿದ್ದೇನೆ. ಆದರೆ, ನಾನು ಹಿಂದೂ ಆಗಿ ರಾಮಮಂದಿರಕ್ಕೆ ಭೇಟಿ ನೀಡುವುದನ್ನು ತಡೆಯಲು ನನಗೇ ಆಗಲಿಲ್ಲ. ರಾಮಮಂದಿರಕ್ಕೆ ಹೋಗಿದ್ದೇ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಇದಕ್ಕಾಗಿಯೇ ನನ್ನನ್ನು ಗುರಿಯಾಗಿಸಿ ಟೀಕಿಸಲಾಗಿದೆ. ಹಾಗಾಗಿ ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಛತ್ತೀಸ್‌ಗಢ ಕಾಂಗ್ರೆಸ್‌ನ ಪ್ರಮುಖ ನಾಯಕಿಯಾಗಿದ್ದ ರಾಧಿಕಾ ಖೇರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಧಿಕಾ ಖೇರ ಅವರು ಬಿಜೆಪಿ ಸೇರುತ್ತಾರೋ, ಇಲ್ಲವೇ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.