ಪುತ್ತೂರು : ಸ್ಥಳೀಯರ ವಿರೋಧದ ನಡುವೆಯೂ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸುಪರ್ದಿಯಲ್ಲಿ ಕೊಳವೆ ಬಾವಿ ತೋಡಿದ ಘಟನೆ ಸೋಮವಾರ ಆರ್ಯಾಪು ಗ್ರಾಮದ ಕಂಬಳತಡ್ಡದಲ್ಲಿ ನಡೆದಿದೆ.
ಮಾಣಿ-ಮೈಸೂರು ಹೆದ್ದಾರಿಯಿಂದ ಒಂದು ಕಿ.ಮೀ. ಒಳರಸ್ತೆಯ ಆರ್ಯಾಪು ಗ್ರಾಮದ ಕಂಬಳತ್ತಡ್ಡ ಎಂಬಲ್ಲಿ ಒಂದು ಭಾಗದ ಸುಮಾರು 80 ಮನೆಗಳಿಗೆ ಕಳೆದ ಹಲವಾರು ಸಮಯಗಳಿಂದ ಕುಡಿಯಲು ನೀರಿಲ್ಲದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಂಡುವಂತೆ ಅಲ್ಲಿನ ನಿವಾಸಿಗಳು ಆರ್ಯಾಪು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಈ ಕುರಿತು ಗ್ರಾಪಂ ಪಿಡಿಒ ನಾಗೇಶ್ ಅವರು ನೀರಿನ ಕೊರತೆ ಇರುವ ಪ್ರದೇಶಕ್ಕೆ ಭೇಟಿ ನೀಡಿದ್ದು, ಬಳಿಕ ಕೊಳವೆ ಬಾವಿ ತೋಡಲು ಕಂಬಳತ್ತಡ್ಡ ಎಂಬಲ್ಲಿ ರಸ್ತೆ ಬದಿಯಲ್ಲಿ ಸ್ಥಳ ಗುರುತಿಸಲಾಗಿತ್ತು.
ಸೋಮವಾರ ಕೊಳವೆಬಾವಿ ಕೊರೆಯಲು ಸಜ್ಜಾಗುತ್ತಿದ್ದಂತೆ ಸ್ಥಳೀಯ ನಾಲ್ಕೈದು ಮನೆಯವರು ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಮಾಹಿತಿ ಕಂದಾಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಪುತ್ತೂರು ತಹಶೀಲ್ದಾರ್ ಕುಂಞಿ ಅಹಮ್ಮದ್, ಕಂದಾಯ ಅಧಿಕಾರಿಗಳು, ತಾಪಂ ಕಾರ್ಯನಿರ್ವಹಣಾಧಿಕಾರಿ ಹನುಮರೆಡ್ಡಿ, ಆರ್ಯಾಪು ಗ್ರಾಪಂ ಪಿಡಿಒ ನಾಗೇಶ್, ಗ್ರಾಮಾಂತರ ಠಾಣಾ ಎಸ್ ಐ ಜಂಬೂರಾಜ್, ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಸಹಿತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುಮಾರು 80 ಮನೆಗಳಿಗೆ ನೀರಿಲ್ಲದೆ ಹಾಹಾಕಾರ ಪಡುವಾಗ ಕೊಳವೆ ಬಾವಿ ಕೊರೆಯಲು ಅಡ್ಡಿಪಡಿಸುವುದು ಸರಿಯಲ್ಲ ಎಂದು ಕೊಳವೆ ಬಾವಿ ಕೊರೆಯಲು ಅವಕಾಶ ನೀಡುವಂತೆ ಸ್ಥಳೀಯರ ಮನವೊಲಿಸಿದರು. ಈ ಸಂದರ್ಭ ಸ್ವಲ್ಪ ಮಾತಿನ ಚಕಮಕಿ ನಡೆಯಿತು. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಕೊಳವೆ ಬಾವಿ ತೆರೆಯಲು ಅಡ್ಡಿಪಡಿಸಿದರೆ 144 ಸೆಕ್ಷನ್ ಜ್ಯಾರಿಗೊಳಿಸುವುದಾಗಿ ತಹಶೀಲ್ದಾರ್ ಎಚ್ಚರಿಕೆ ನೀಡಿದರು. ಬಳಿಕ ಪರಿಸ್ಥಿತಿ ತಿಳಿಗೊಂಡು ಕೊಳವೆ ಬಾವಿ ಕೊರೆಯಲಾಯಿತು.
ಕೊಳವೆ ಬಾವಿ ತೋಡಲು ಜಾಗ ಗುರುತಿಸಿದ ಬಳಿಕ ಸ್ಥಳೀಯ ನಾಲ್ಕೈದು ಮನೆಯವರು ಈ ಜಾಗದಲ್ಲಿ ಕೊಳವೆ ಬಾವಿ ತೆರೆಯುವುದು ಬೇಡ. ಬೇರೆ ಜಾಗ ತೋರಿಸುತ್ತೇವೆ ಅಲ್ಲಿ ತೆಗೆಯಿರಿ. ಅಲ್ಲದೆ ನಮ್ಮ ಕೊಳವೆ ಬಾವಿಗಳಿಂದ ನೀರು ನೀಡುವುದಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಈಗ ತೆರೆಯಲು ಉದ್ದೇಶಿಸಿರುವ ಕೊಳವೆ ಬಾವಿ ಪಕ್ಕದಲ್ಲಿ ಖಾಸಗಿಯವರ ಕೊಳವೆ ಬಾವಿಗಳಿದ್ದು, ತಮ್ಮ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಬಹುದು ಎಂಬ ಆತಂಕದಿಂದ ಅಡ್ಡಿಪಡಿಸಿದ್ದೇವೆ ಹೊರತು ಕೊಳವೆ ಬಾವಿ ತೆರೆಯಲು ನಮ್ಮ ವಿರೋಧವಿಲ್ಲ ಎಂದು ಈ ಸಂದರ್ಭ ತಿಳಿಸಿದ್ದಾರೆ.
ಕೊನೆಗೂ ಕಂದಾಯ ಅಧಿಕಾರಿಗಳು, ಗ್ರಾಪಂ ಪಿಡಿಒ ಹಾಗೂ ಗ್ರಾಮಾಂತರ ಪೊಲೀಸರ ಮಾತುಕತೆಯಿಂದ ಅಡ್ಡಿ ಆತಂಕಗಳಿಗೆ ಕೊನೆ ಹಾಡಲಾಯಿತು. ಮುಂದಿನ ದಿನಗಳಲ್ಲಿ ತಮಗೆ ಕೊಳವೆ ಬಾವಿ ತೆರೆಯಲು ಅನುಮತಿ ನೀಡಬೇಕು ಎಂದು ಸ್ಥಳೀಯರು ಗ್ರಾಪಂ ಪಿಡಿಒ, ಕಂದಾಯ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಈ ಕುರಿತು ಬರಹ ರೂಪದಲ್ಲಿ ಬರೆದುಕೊಡಲಾಗುವುದು ಎಂದು ಗ್ರಾಪಂ ಪಿಡಿಒ ತಿಳಿಸಿದ ಬಳಿಕ ಸ್ಥಳೀಯರು ಸುಮ್ಮನಾದರು.
ಆರ್ಯಾಪು ಗ್ರಾಮದ ಕಂಬಳತ್ತಡ್ಡ ಎಂಬಲ್ಲಿ ಕಳೆದ ಹಲವಾರು ಸುಮಾರು 80 ಮನೆಗಳಿಗೆ ಹಲವು ಸಮಯಗಳಿಂದ ಕುಡಿಯುವ ನೀರಿಲ್ಲದೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಪಂಗೆ ಮನವಿ ಮಾಡಿದ್ದರು. ಅದರಂತೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕೊಳವೆ ಬಾವಿ ತೊಡುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ಈ ಪ್ರದೇಶದಲ್ಲಿ ಖಾಸಗಿ ತೋಟಗಳಿದ್ದು, ಸ್ಥಳೀಯ ನಾಲ್ಕೈದು ಮನೆಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಾರ್ವಜನಿಕವಾಗಿ ನೀರಿನ ವ್ಯವಸ್ಥೆ ಕಲ್ಪಿಸಲು ಅಡ್ಡಿಪಡಿಸುವುದು ಸರಿಯಲ್ಲ. ಅಡ್ಡಿಪಡಿಸಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದೀಗ ಮಾತುಕತೆ ಬಳಿಕ ಸಮಸ್ಯೆ ಬಗೆಹರಿದಿದೆ.
- ಕುಂಞಿ ಅಹಮ್ಮದ್, ತಹಶೀಲ್ದಾರ್, ಪುತ್ತೂರು