ಪುತ್ತೂರು: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಭಾರತ) ನ ರಾಷ್ಟ್ರೀಯ ಮಟ್ಟದ ಫೌಂಡೇಶನ್ ಕಮ್ ಅವಾರ್ಡ್ಸ್ ಡೇ ಸಮ್ಮೇಳನದಲ್ಲಿ ನಡೆಯುವ ಪ್ರಖ್ಯಾತ “ಇಂಜಿನಿಯರ್ಸ್ ಪ್ರಶಸ್ತಿಗೆ”ಇಂಜಿನಿಯರ್ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಘಟಕದ ಸದಸ್ಯ ಪಡೂರು ಮತಾವು ನಿವಾಸಿ ಶಿವರಾಮ್ ಎಮ್.ಎಸ್. ಆಯ್ಕೆಯಾಗಿದ್ದಾರೆ.
ಮೇ 4ರಂದು ಮಹಾರಾಷ್ಟ್ರದ ನಾಸಿಕ್ ಬುದ್ಧ ವಿಹಾರ್ ರಾಡಿಸನ್ ಬ್ಲೂವಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಶಸ್ತಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಸನಪ್ ಅವರಿಂದ ಸ್ವೀಕರಿಸಲಿದ್ದಾರೆ.
ಸಮ್ಮೇಳನದಲ್ಲಿ ಭಾರತದ ವಿವಿಧ ಭೌಗೋಳಿಕ ಸ್ಥಳಗಳ ಪ್ರಖ್ಯಾತ ಇಂಜಿನಿಯರ್ ಗಳನ್ನು ಸನ್ಮಾನಿಸಲಿದ್ದು, ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆಗಳು , ಕಾರ್ಯಕ್ಷಮತೆ ಮತ್ತು ಕೊಡುಗೆಯನ್ನು ಗುರುತಿಸುವ ಗುರುತಾಗಿ ಪ್ರಖ್ಯಾತ ಇಂಜಿನಿಯರ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ದಕ್ಷಿಣ ಕನ್ನಡದಿಂದ ಪುತ್ತೂರಿನ ಶಿವರಾಮ ಮತಾವು ಮತ್ತು ಬೆಳ್ತಂಗಡಿಯ ಸಂಪತ್ ರತ್ನ ರಾವ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪುತ್ತೂರು ಘಟಕದಿಂದ ಶಿವರಾಮ್ ಮತಾವು, ಚೇತನ್, ವಿನೋದ್, ಹರೀಶ್ ಎಂ, ಆದರ್ಶ ಕದ್ರಿ ಮತ್ತು ಪ್ರಮೋದ್ ಕುಮಾರ್ ಅವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪಡ್ನೂರು ಸೇಸಪ್ಪ ಮತ್ತು ಲಲಿತಾ ದಂಪತಿ ಪುತ್ರರಾಗಿರುವ ಶಿವರಾಮ ಎಮ್.ಎಸ್. ಅವರು ವಸತಿ, ಕೈಗಾರಿಕಾ ಮತ್ತು ಎತ್ತರದ ಕಟ್ಟಡಗಳ ನಿರ್ಮಾಣದಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕರಾಗಿ ಹತ್ತು ವರ್ಷಗಳ ಕಾಲ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಚ್ ಒ ಡಿ ಯಾಗಿ ಕೆಲಸ ಮಾಡಿದ್ದಾರೆ. ಇಲಾಖೆಗೋಸ್ಕರ ಸಾರ್ವಜನಿಕ ಮತ್ತು ಖಾಸಗಿ ರಚನೆಗಳ ಮೂರನೇ ಪಕ್ಷದ ಪರಿಶೀಲನೆಗಾಗಿ ಅವರ ಸೇವೆಯನ್ನು ವಿಸ್ತರಿಸಿದ್ದರು.
ರಾಜ್ಯ ಮತ್ತು ಕೇಂದ್ರ ಪ್ರಶಸ್ತಿಗಳನ್ನು ಪಡೆದ ಹಲವಾರು ವಿದ್ಯಾರ್ಥಿ ಯೋಜನೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಹಲವಾರು ರಾಷ್ಟ್ರೀಯ ಮಟ್ಟದ ನಿಯತಕಾಲಿಕ ಪತ್ರಿಕೆಗಳನ್ನು ಪ್ರಕಟಿಸಿದ್ದರು. ಅವರ ಏಳು ವಿದ್ಯಾರ್ಥಿಗಳು ರಾಜ್ಯ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ Rank ಗಳಿಸಿದ್ದಾರೆ. 25+ ಸಿವಿಲ್ ಇಂಜಿನಿಯರಿಂಗ್ ವಿಷಯಗಳನ್ನು ನಿರ್ವಹಿಸಿದ್ದಾರೆ.
ಎಸಿಸಿಇ (ಐ),ಎಎಂಐಇ, ಐಎಸ್ ಟಿಇ, ಪಿಎಸಿಇ, ರೋಟರಿ ಮತ್ತು ಕೆಲವು ಸಮುದಾಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ. ಓದುವುದು ಪ್ರಯಾಣಿಸುವುದು, ಸಂಗೀತ ಕೇಳುವುದು ಇವರ ಹವ್ಯಾಸವಾಗಿದೆ. 2018 ರಲ್ಲಿ ವಿಶ್ವ ತುಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದುಬೈಗೆ ಭೇಟಿ ನೀಡಿದ್ದರು.