ಪುತ್ತೂರು: ಕೃತಕ ಬುದ್ದಿಮತ್ತೆ ತಂತ್ರಜ್ಞಾನವು ವ್ಯಾಪಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಿಲ್ಲದೆ ಭವಿಷ್ಯದ ದಿನಗಳಿಲ್ಲ ಎನ್ನುವವರೆಗೆ ಸರ್ವವ್ಯಾಪಿಯಾಗಿದೆ. ಯಾವುದೇ ತಂತ್ರಜ್ಞಾನವಾದರೂ ಅದರ ಬಳಕೆಯ ವಿಧಾನದ ಮೇಲೆ ಒಳಿತು ಕೆಡುಕುಗಳು ನಿರ್ಧರಿತವಾಗುತ್ತವೆ ಎಂದು ಎಂಐಟಿ ಮಣಿಪಾಲದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ರಾಘವೇಂದ್ರ ಎಸ್. ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಭಾರತೀಯ ತಾಂತ್ರಿಕ ಶಿಕ್ಷಣ ಸಂಘ ನವದೆಹಲಿ, ವಿವೇಕಾನಂದ ಸಂಶೋಧನಾ ಕೇಂದ್ರ ಪುತ್ತೂರು ಮತ್ತು ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ “ಜ್ಞಾನ ಸಂಗಮ-2024” ಕ್ಕೆ ಚಾಲನೆ ನೀಡಿ ಮಾತಾಡಿದರು.
ಯಾವುದೇ ತಂತ್ರಜ್ಞಾನಕ್ಕೆ ಅದರದ್ದೇ ಆದ ಮಿತಿ ಇರುತ್ತದೆ. ಹಾಗಾಗಿ ಸಂಪೂರ್ಣವಾಗಿ ಅದರ ಮೇಲೆ ಅವಲಂಬಿತವಾಗದೆ ಅದರ ಸಹಾಯವನ್ನು ಪಡೆದುಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ, ಹೆಸರಿಗೆ ತಕ್ಕಂತೆ ಜ್ಞಾನದ ಸಂಗಮ ಇಲ್ಲಿ ನಡೆಯುತ್ತಿದೆ. ಶಿಸ್ತಿನ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಆಸ್ತಿಯಾಗುವ ರೀತಿಯಲ್ಲಿ ಇಲ್ಲಿ ವಿದ್ಯಾದಾನ ನಡೆಯುತ್ತಿದೆ. ಇದು ನಮ್ಮ ವಿದ್ಯಾಸಂಸ್ಥೆಗಳ ಗುರಿಯಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಶುಭ ಹಾರೈಸಿದರು.
ಇಲ್ಲಿ ಮಂಡಿಸಲಾಗುವ ಎಲ್ಲಾ ಪ್ರೌಢ ಪ್ರಬಂಧಗಳನ್ನು ಮುದ್ರಿಸಿದ ಸಂಚಿಕೆಯನ್ನು ಅತಿಥಿಗಳು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
“ಜ್ಞಾನ ಸಂಗಮ-2024” ಸಂಯೋಜಕಿ ಪ್ರೊ.ರಜನಿ ರೈ ಸ್ವಾಗತಿಸಿದರು. ಪ್ರೊ.ಭಾರತಿ ವಂದಿಸಿದರು. ವಿದ್ಯಾರ್ಥಿಗಳಾದ ಸ್ನೇಹಾ.ಬಿ., ಆಕರ್ಷ್ ರೈ.ಎಂ. ಕಾರ್ಯಕ್ರಮ ನಿರ್ವಹಿಸಿದರು.