ಪುತ್ತೂರು: ನೆಹರೂನಗರದಿಂದ ವಿವೇಕಾನಂದ ಕಾಲೇಜು ಕ್ಯಾಂಪಸ್ ಮೂಲಕ ಹಾರಾಡಿಗೆ ಸಂಪರ್ಕಿಸುವ ರಸ್ತೆಯ ರೈಲ್ವೇ ಮೇಲ್ಸೇತುವೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಸಂಪೂರ್ಣಗೊಂಡಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರ ಸಂಜೆ ಭೇಟಿ ನೀಡಿದರು.
ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಸುಮಾರು 5.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ನಳಿನ್ ಕುಮಾರ್ ಮಾಧ್ಯಮಗಳ ಜತೆ ಮಾತನಾಡಿ, ಮೇಲ್ಸೇತುವೆ ಅಗಲಗೊಳಿಸಬೇಕೆಂಬುದು ಬಹು ಸಮಯಗಳ ಬೇಡಿಕೆಯಾಗಿತ್ತು. ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುವ ಸೇತುವೆಯನ್ನು ಅಭಿವೃದ್ಧಿಪಡಿಸಬೇಕೆಂದು ವಿವೇಕಾನಂದ ವಿದ್ಯಾಸಂಸ್ಥೆಯಿಂದಲೂ ಮನವಿ ಸಲ್ಲಿಸಲಾಗಿತ್ತು. ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಪುತ್ತೂರು, ಉಪ್ಪಿನಂಗಡಿಗೆ ಬೈಪಾಸ್, ವರ್ತುಲ ರಸ್ತೆಯಾಗಿಯೂ ಬಳಕೆಯಾಗುವ ಉದ್ದೇಶದಿಂದ ಇದು ಆದ್ಯತೆಯ ಅಭಿವೃದ್ಧಿ ವಿಚಾರವಾಗಿತ್ತು. ಬಳಿಕದಲ್ಲಿ ರೈಲ್ವೇ ನಿಯಮಾವಳಿ 50:50 ರ ಅನುಪಾತದ ಅನುದಾನ ನೀಡುವ ಕುರಿತ ಚರ್ಚೆಯೂ ಇತ್ತು. ಆದರೆ ಕೊನೆಗೆ ಸಂಪೂರ್ಣ ಅನುದಾನವನ್ನೂ ಕೇಂದ್ರ ರೈಲ್ವೇ ಇಲಾಖೆಯೇ ನೀಡಿದೆ. ಸ್ಥಳೀಯಾಡಳಿತದ ವ್ಯಾಪ್ತಿಯಲ್ಲಿದ್ದರೂ ಸಂಪೂರ್ಣ ಅನುದಾನವನ್ನು ರೈಲ್ವೇ ಇಲಾಖೆಯೇ ನೀಡುವುದು ದೇಶದಲ್ಲೇ ಪ್ರಥಮ ಎಂದು ಹೇಳಿದರು.
ಹಲವು ರೀತಿಯ ಅಡೆತಡೆಗಳಿದ್ದರೂ 5 ತಿಂಗಳ ಸೀಮಿತ ಅವಧಿಯಲ್ಲಿ ಮೇಲ್ಸೇತುವೆ, ರಸ್ತೆಯೂ ಅಭಿವೃದ್ಧಿಗೊಂಡಿದ್ದು, ಸಂಚಾರಕ್ಕೆ ಮುಕ್ತಗೊಂಡಿದೆ. ಸೀಮಿತ ಅವಧಿಯಲ್ಲಿ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ನಳಿನ್, ರೈಲ್ವೇಗೆ ಸಂಬಂಧಿಸಿದ ಪುತ್ತೂರಿನ ಎಲ್ಲಾ ಬೇಡಿಕೆಗಳು ಈಡೇರಿವೆ. ಎಪಿಎಂಸಿ ರೈಲ್ವೇ ಅಂಡರ್ ಪಾಸ್, ಹಾರಾಡಿ ರೈಲ್ವೇ ಸಂಪರ್ಕ ರಸ್ತೆ, ವಿವೇಕಾನಂದ ಮೇಲ್ಸೇತುವೆಯ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್, ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ವಿವೇಕಾನಂದ ವಿದ್ಯಾಸಂಸ್ಥೆಗಳಿಗೆ ಸಂಬAಧಪಟ್ಟ ಪ್ರಮುಖರಾದ ಅಚ್ಯುತ್ ನಾಯಕ್, ಇ. ಶಿವಪ್ರಸಾದ್, ಸಂತೋಷ್ ಬೊನಂತಾಯ, ರವಿ ನಾರಾಯಣ, ಶ್ರೀಪತಿ ಕಲ್ಲುರಾಯ, ರೂಪಲೇಖಾ, ವಿಷ್ಣು ಗಣಪತಿ ಭಟ್, ಮುರಳಿಕೃಷ್ಣ ಚಳ್ಳಂಗಾರು, ಪ್ರಮುಖರಾದ ಅಜಿತ್ ರೈ ಹೊಸಮನೆ, ಡಾ. ಸುಧಾ ರಾವ್, ಭಾಮಿ ಅಶೋಕ್ ಶೆಣೈ,ವಿಶ್ವನಾಥ ಗೌಡ, ಶಿವಕುಮಾರ್, ವಿನಯ ಕಲ್ಲೇಗ, ದಿನೇಶ್ ಜೈನ್, ಮುರಳಿಕೃಷ್ಣ ಹಸಂತಡ್ಕ, ಶ್ರೀಧರ್ ತೆಂಕಿಲ, ಸೀತಾರಾಮ ರೈ ಕೆದಂಬಾಡಿಗುತ್ತು, ರಾಜೇಶ್ ಬನ್ನೂರು ಸೇರಿದಂತೆ ಸ್ಥಳೀಯರು, ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.