ಪುತ್ತೂರು: ಬೌದ್ಧಿಕತೆಯಷ್ಟೇ ದೈಹಿಕ ಕ್ಷಮತೆಯೂ ಮುಖ್ಯ. ಆಧುನಿಕ ಶಿಕ್ಷಣ ಬೌದ್ಧಿಕತೆಗಷ್ಟೇ ಆದ್ಯತೆ ನೀಡುತ್ತಿದೆ. ಆದರೆ ದೈಹಿಕ ದೃಢತೆ ಸಾಧಿಸುವುದು ಅತ್ಯಂತ ಅಗತ್ಯ. ಕ್ರೀಡೆಗಳಲ್ಲಿ ತೊಡಗುವುದರಿಂದ ನಾವು ದೈಹಿಕವಾಗಿಯೂ ಸಮರ್ಥರೆನಿಸಿಕೊಳ್ಳಬಹುದು. ಶಾಲಾ ಕಾಲೇಜುಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಅವಕಾಶಗಳನ್ನು ಸೃಜಿಸಿಕೊಂಡು ದೇಹಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್ ಹೇಳಿದರು.

ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ 2024 ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿ ಜೀವನದಲ್ಲಿ ಹಠ ಸಾಧನೆ ಮುಖ್ಯ. ಸಾವರ್ಕರ್ ಅವರಂತಹ ಮಹಾನ್ ಪುರುಷರು ಹಠ ಸಾಧನೆಗೆ ಉತ್ಕೃಷ್ಟ ಮಾದರಿಯಾಗಿ ನಮ್ಮ ಮುಂದಿದ್ದಾರೆ. ಅಂತಹವರನ್ನು ಆದರ್ಶವಾಗಿರಿಸಿಕೊಂಡು ಹಠದಲ್ಲಿ ಮುನ್ನಡೆಯಬೇಕು. ಕ್ರೀಡಾಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗುವುದರಿಂದ ಅಂತಹ ಹಠಸಾಧನೆ ಸಾಧ್ಯ ಎಂದರು.

ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಿಯಾಲ್ ಆಳ್ವ ಸ್ವಾಗತಿಸಿದರು. ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ವಂದಿಸಿದರು. ವಿದ್ಯಾರ್ಥಿನಿ ಚೈತನ್ಯಾ ಸಿ ಕಾರ್ಯಕ್ರಮ ನಿರ್ವಹಿಸಿದರು.