ಪುತ್ತೂರು: ಮತದಾನ ಪ್ರಕ್ರಿಯೆ ರೆಕಾರ್ಡ್ ಆಗಿದ್ದ ವೆಬ್ ಕ್ಯಾಮರಾವೊಂದನ್ನು ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರುನಲ್ಲಿ ನಡೆದಿದೆ.
ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 228ರಲ್ಲಿ ಅಳವಡಿಸಿದ್ದ ವೆಬ್ ಕ್ಯಾಮರಾವನ್ನು ಸಿಮ್, ಮೆಮೊರಿ ಕಾರ್ಡ್ ಸಮೇತ ಕಳವು ಮಾಡಲಾಗಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಏ.24ರಂದು ಈ ವೆಬ್ ಕ್ಯಾಮರಾವನ್ನು ಅಳವಡಿಸಲಾಗಿದ್ದು, 26ರಂದು ರಾತ್ರಿ 8 ಗಂಟೆಯವರೆಗಿನ ಅಂದರೆ ಮತದಾನ ಪ್ರಕ್ರಿಯೆ ದೃಶ್ಯಗಳು ಇದರಲ್ಲಿ ಸೇವ್ ಆಗಿತ್ತು. ಕ್ಯಾಮರಾ ಹಾಗೂ ಚುನಾವಣಾ ಧ್ವಜವನ್ನು ಅಪರಿಚಿತರು ಕಳವು ಮಾಡಿದ್ದಾರೆ ಎಂದು ತೆಕ್ಕಾರು ಗ್ರಾಮ ಪಂಚಾಯಿತಿ ಸಿಬ್ಬಂದಿ, ಬೂತ್ ಲೆವಲ್ ಅಧಿಕಾರಿ ಮಹಮ್ಮದ್ ಸಿಹಾಬ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 10,600 ರೂ. ಬೆಲೆ ಬಾಳುವ ಈ ಕ್ಯಾಮರಾದಲ್ಲೇ ಸಿಮ್, ಮೆಮೊರಿ ಕಾರ್ಡ್ ಅಳವಡಿಸಲಾಗಿತ್ತು. ಚುನಾವಣೆಯ ಬಳಿಕ ಎರಡು ದಿನ ಸರಕಾರಿ ರಜೆ ಇದ್ದು, ಏ.29ರಂದು ಮಧ್ಯಾಹ್ನ ತಾಲೂಕು ಚುನಾವಣಾ ಶಾಖೆಯಿಂದ ಬಂದ ಸೂಚನೆಯಂತೆ ವೆಬ್ ಕ್ಯಾಮರಾವನ್ನು ವಿ.ಎ. ಕಚೇರಿಗೆ ನೀಡಲು ಪಂಚಾಯತ್ ಸಿಬ್ಬಂದಿ ಸಂಜೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮಂಗಳವಾರ ಬೆಳಿಗ್ಗೆ ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಮಂಗಳೂರಿನಿಂದ ಬೆರಳಚ್ಚು ತಜ್ಞರು ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.