ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮೂರನೇ ವರ್ಷದ ‘ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ, ಸಾಧಕರಿಗೆ ಅಭಿನಂದನೆ, ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಾರ್ಷಿಕ ಮಹಾಸಭೆ ಮೇ 4 ರಂದು ಜೈನ ಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಸಂಘದ ವತಿಯಿಂದ ನೀಡಲಾಗುವ ‘ಸ್ವರ್ಣ ಸಾಧನಾ ಪ್ರಶಸ್ತಿ’ಯನ್ನು ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕ, ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಆಡಳಿತ ನಿರ್ದೇಶಕ ಕೆ.ಪ್ರಮೋದ್ ಕುಮಾರ್ ರೈ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿವೇಕಾನಂದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್. ಜಿ. ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಸಾಧನೆ ಮಾಡಿದ ಎಸ್. ಆರ್. ಕೆ. ಲ್ಯಾಡರ್ ನ ಕೇಶವ ಅಮೈ, ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (ಎನ್.ಸಿ.ಸಿ.) ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ತೇಜಸ್ವಿನಿ ವಿ. ಶೆಟ್ಟಿ, ಸಾಂಸ್ಕೃತಿಕದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಸ್ವಾತಿ ಎನ್. ವಿ., ಶಮಾ ಚಂದುಕೊಡ್ಲು, ಪ್ರಣಮ್ಯ ಅವರಿಗೆ ಅಭಿನಂದನೆ ನಡೆಯಲಿದೆ.
ದಕ್ಷಿಣ ಆಫ್ರಿಕಾದ ಟುನಿಷಿಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ವಿಜೇತ ವಿವೇಕಾನಂದ ಸಿ.ಬಿ.ಎಸ್.ಇ. ಶಾಲೆಯ ಆಪ್ತ ಚಂದ್ರಮತಿ ಮುಳಿಯ ಅವರಿಗೆ ಗೌರವಾರ್ಪಣೆ ಮಾಡಲಾಗುವುದು. ಸಂಘದ ಹಿರಿಯ 48 ಜನ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮಧ್ಯಾಹ್ನದ ಬಳಿಕ ಸಂಘದ ವಾರ್ಷಿಕ ಮಹಾಸಭೆಯು ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ವತ್ಸಲಾ ರಾಜ್ಞಿ, ಕಾರ್ಯದರ್ಶಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಶಾಂತಿ ಟಿ. ಹೆಗಡೆ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ ಉಪಸ್ಥಿತರಿದ್ದರು.