ಪುತ್ತೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜಾರಿಗೊಳಿಸಿದ ನೀತಿ ಸಂಹಿತೆ ಎಂದಿನಂತೆ ಇದ್ದರೂ ಕೆಲವೊಂದು ವಿಷಯಗಳಿಗೆ ನೀತಿ ಸಂಹಿತೆ ಸಡಿಲಿಕೆ ಮಾಡಲಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದ್ದಾರೆ.
ಮಂಗಳವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆ ಶಾಂತಿಯುತವಾಗಿ ಮುಗಿದಿದೆ. ಮುಂದೆ ಜೂ.೪ರಂದು ಮತ ಎಣಿಕೆ ನಡೆಯಲಿದೆ. ಅಲ್ಲಿವರೆಗೂ ಅಥವಾ ಚುನಾವಣಾ ಆಯೋಗದ ನೊಟೀಸ್ ಬರುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಖಾಸಗಿ ಕಾರ್ಯಕ್ರಮಗಳಾದ ಮದುವೆ ಅಥವಾ ಇನ್ನಾವುದೇ ಸಮಾರಂಭಗಳಿಗೆ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲ. ಆದರೆ ಸಾರ್ವಜನಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾಹಿತಿ ನೀಡಬೇಕು. ಸಮಾರಂಭದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ ಎಂಬುದನ್ನು ದೃಢಪಡಿಸಬೇಕು. ಇನ್ನೂ ಇತರ ಅನುಮತಿಗಳಾದ ಮೈಕ್ ಪರ್ಮೀಷನ್, ಪೊಲೀಸ್ ಮಾಹಿತಿಯನ್ನು ಮೊದಲಿನಂತೆ ಪಾಲಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ತಹಸೀಲ್ದಾರ್ ಕುಂಞಿ ಅಹಮ್ಮದ್ ಉಪಸ್ಥಿತರಿದ್ದರು.