ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರ ಏ.28 ರಿಂದ ಮೇ4 ರ ತನಕ ನಡೆಯಲಿದ್ದು, ಬಿಳಿಯೂರು ಹಿ. ಪ್ರಾ ಶಾಲೆಯಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಸಶಕ್ತ ಭಾರತಕ್ಕಾಗಿ ಯುವಜನತೆ ಎಂಬ ಘೋಷಣೆಯೊಂದಿಗೆ ಏಳು ದಿನಗಳ ಕಾಲ ನಡೆಯಲಿರುವ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರವನ್ನು ಬಿಳಿಯೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಳಿನಿ ಉದ್ಘಾಟಿಸಿ, ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಥಳದಲ್ಲಿ ಶಿಬಿರ ಮಾಡುತ್ತಿರುವುದು ನಮ್ಮ ಊರಿಗೆ ಒಂದು ಸಂತಸದ ವಿಷಯ. ಇದಕ್ಕೂ ಮೊದಲು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಶಿಬಿರವನ್ನು ಅಚ್ಚುಕಟ್ಟಾಗಿ ನಡೆಸಿರುತ್ತಾರೆ. ಅಂದು ನೀಡಿದ ಸಹಕಾರ ಇಂದು ಕೂಡ ನೀಡುತ್ತೇವೆ ಎಂದು ಆಶ್ವಾಸನೆ ನೀಡಿ ಶಿಬಿರಕ್ಕೆ ಶುಭಹಾರೈಸಿದರು.
ಕಾಲೇಜಿನ ಪ್ರಾಚಾರ್ಯ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ, ಓರ್ವ ಕ್ರೀಡಾಪಟುವು ಸ್ಪರ್ಧೆಗಳಲ್ಲಿ ಪದಕ ಗಳಿಸಬೇಕಾದರೆ ಹಲವಾರು ಹಂತಗಳನ್ನು ದಾಟಬೇಕಾಗುತ್ತದೆ. ಯಾವುದೇ ಪ್ರಶಸ್ತಿ ಅಥವಾ ಪದಕಗಳ ಹಿಂದೆ ಸಾಕಷ್ಟು ಶ್ರಮ ಇರುತ್ತದೆ. ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಶ್ರಮದ ಬೆಲೆ ತಿಳಿಯುತ್ತದೆ. ಜೀವನದ ಅನುಭವ ಪಡೆದಾಗ ಮಾತ್ರ ಜೀವನ ಮೌಲ್ಯಗಳ ಬಗ್ಗೆ ತಿಳಿಯುತ್ತದೆ. ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯನ್ನು ಹೊಂದಿದ್ದಾಗ ಮಾತ್ರ ಅವರು ನಿಜವಾದ ಮಾನವರಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯ ಕುಮಾರ್ ಎಂ., ಗ್ರಾಮ ಪಂಚಾಯಿತಿ ಸದಸ್ಯ ತಣಿಯಪ್ಪ ಪೂಜಾರಿ, ಬಿಳಿಯೂರು ಶಾಲಾ ಮುಖ್ಯ ಶಿಕ್ಷಕಿ ಶೀಲಾ ಡಯಾನಾ ಮೋರಸ್ ಶುಭ ಹಾರೈಸಿದರು.
ಮಧುಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ವಾಸುದೇವ ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪಾ ಎನ್. ವಂದಿಸಿದರು. ಎನ್ ಎಸ್ ಎಸ್ ಕಾರ್ಯದರ್ಶಿ ವೈಷ್ಣವಿ ಕೆ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಬಿರಾಧಿಕಾರಿಗಳಾದ ಧನ್ಯ ಪಿ. ಟಿ., ಚೈತ್ರ ಸಹಕರಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಗೌಡ, ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಸುವರ್ಣ, ಹಿರಿಯ ವಿದ್ಯಾರ್ಥಿ ಪೊನ್ನಪ್ಪ ಉಪಸ್ಥಿತರಿದ್ದರು.