ಪುತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆ ಎನ್ನುವುದು ಅತ್ಯಂತ ಶ್ರೇಷ್ಠವಾದ ಪರಂಪರೆ. ರಾಮಾಯಣ, ಮಹಾಭಾರತ, ವೈದಿಕ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವಿದೆ. ಜ್ಞಾನದ ದಾರಿಯಲ್ಲಿ ಪ್ರವೇಶ ಮಾಡಲು ಮೊದಲು ಮನಸ್ಸನ್ನು ನಿಗ್ರಹಿಸಬೇಕು. ನಮ್ಮ ಜ್ಞಾನದ ಹಾದಿಯನ್ನು ನಾವೇ ಹುಡುಕಿ ಅದರಲ್ಲಿ ಮುನ್ನುಗ್ಗಬೇಕು. ಜೀವನದಲ್ಲಿ ಅಧ್ಯಯನವಿಲ್ಲದೆ ಯಾವುದು ಪರಿಪೂರ್ಣವಾಗುವುದಿಲ್ಲ. ಅಧ್ಯಯನ ಮಾಡಲು ಆಸಕ್ತಿ ಮುಖ್ಯ ಎಂದು ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ.ಶ್ರೀಧರ್ ಹೆಚ್.ಜಿ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ಐಕ್ಯೂಎಸಿ ಮತ್ತು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಭವಿಷ್ಯ, ಯಶಸ್, ವಿಕಾಸ ಮತ್ತು ನ್ಯಾಯಾಧಾರ ಘಟಕಗಳ ವಿಶೇಷ ಶಿಬಿರ “ಪ್ರೇರಣಾ-2024” ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ತರ. ಹಿಂದಿನ ಪರಂಪರೆಯಲ್ಲಿ ಗುರುಗಳನ್ನು ಆಚಾರ್ಯ ಎಂದು ನಮೂದಿಸಿದ್ದಾರೆ. ವೈಯುಕ್ತಿಕ ಹಿತಾಸಕ್ತಿಯ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ, ನ್ಯಾಯವಾದಿ ಮುರಳೀಕೃಷ್ಣ ಕೆ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಶ್ರೀಧರ್ ಹೆಚ್.ಜಿ. ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ಧನುಷ್ ಸ್ವಾಗತಿಸಿ, ವಿದ್ಯಾರ್ಥಿನಿ ಅಪೂರ್ವ ವಂದಿಸಿದರು, ವಿದ್ಯಾರ್ಥಿನಿ ಮೋಕ್ಷ ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಸಂಯೋಜಕ ಡಾ.ಪ್ರಮೋದ್ ಹಾಗೂ ಉಪನ್ಯಾಸಕಿ ಕವಿತಾ ಇವರು ಸಹಕರಿಸಿದರು.