ಪುತ್ತೂರು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಂಕವನ್ನು ಗಳಿಸುವುದು ಮಾತ್ರವಲ್ಲದೇ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಕಲಿತು ಪರಿಪೂರ್ಣರಾಗಿ ಇಲ್ಲಿಂದ ತೆರಳಬೇಕು ಎಂಬುವುದು ವಿವೇಕಾನಂದ ಕಾಲೇಜಿನ ಮುಖ್ಯ ಉದ್ದೇಶವಾಗಿದೆ. ಈಗಿನ ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರವನ್ನು ಕಲಿಯುವುದು ತುಂಬಾ ಮುಖ್ಯ. ಅದನ್ನು ನಾವು ವಿದ್ಯಾರ್ಥಿಗಳಿಗೆ ನಿರಂತರವಾಗಿ ನೀಡುತ್ತಿದ್ದೇವೆ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ಶಿಕ್ಷಕ ರಕ್ಷಕ ಸಂಘ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ವಿದ್ಯಾರ್ಥಿಗಳ ಹೆತ್ತವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಧೈರ್ಯವನ್ನು ತುಂಬುವ ಕೆಲಸ ಶಿಕ್ಷಕರು ಹಾಗೂ ಪೋಷಕರು ಮಾಡಬೇಕು. ಬದುಕಿನಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸ್ವೀಕರಿಸಿ ಅದನ್ನು ಎದುರಿಸುವ ಶಿಕ್ಷಣ ನಮಗೆ ದೊರಕಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ .ವಿ. ಗಣಪತಿ ಭಟ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಿಂದು ವಿಪುಲ ಅವಕಾಶಗಳಿವೆ. ಉದ್ಯೋಗವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಸರ್ಟಿಫಿಕೇಟ್ ಕೋರ್ಸ್ ಗಳು ಪ್ರಯೋಜನಕಾರಿ. ಇವುಗಳನ್ನೆಲ್ಲಾ ವಿದ್ಯಾರ್ಥಿಗಳು ಬಳಸಿಕೊಳ್ಳುವುದು ಅಗತ್ಯ ಎಂದರು.
ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ. ಎಚ್.ಜಿ ಶ್ರೀಧರ್, ಕಾಲೇಜಿನ ವಿಶೇಷ ಅಧಿಕಾರಿ, ಡಾ. ಶ್ರೀಧರ್ ನಾಯ್ಕ್ ಬಿ., ಐಕ್ಯೂಎಸಿ ಘಟಕದ ಸಂಯೋಜಕ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಕೆ.ಎಸ್. ಉಪಸ್ಥಿತರಿದ್ದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೃಷ್ಣ ಗಣರಾಜ್ ಭಟ್ ಎಸ್. ಸ್ವಾಗತಿಸಿ, ಉಪನ್ಯಾಸಕಿ ಜ್ಯೋತಿ ವಿ. ವಂದಿಸಿದರು. ಉಪನ್ಯಾಸಕಿ ಡಾ. ಮೈತ್ರಿ ಭಟ್ ನಿರ್ವಹಿಸಿದರು.