ಪುತ್ತೂರು: ಧರ್ಮ ಎಂಬುದು ಸೂಕ್ಷ್ಮವಾದುದು. ಅದಕ್ಕೆ ಸರಿಯಾದ ಅರ್ಥ ಕಂಡು ಹಿಡಿಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಧರ್ಮದ ಅರಿವು ಪಡೆದು ಹಿರಿಯರು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ಜೀವನ ಸಾಗಿಸಬೇಕಾದ ಅಗತ್ಯತೆಯಿದ್ದು, ಆಗ ನಿಜವಾದ ಧರ್ಮಕ್ಕೆ ಅರ್ಥ ಬರುತ್ತದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾಬಲ್ಲಭ ತೀರ್ಥ ಸ್ವಾಮಿಜಿ ನುಡಿದರು.
ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಏ.24ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬ್ರಹ್ಮಕಲಶ ಎಂದರೆ ಬಿಂಬದಲ್ಲಿ ಸಾನಿಧ್ಯ ಸ್ಥಾಪನೆ ಮಾಡುವುದು. ಕಲಶದಲ್ಲಿ ಆವಾಹನೆ ಮಾಡಿ, ಅಭಿಷೇಕ ಮಾಡಿ ವಿಶೇಷ ಸಾನಿಧ್ಯ ತುಂಬಿಸುವುದೇ ಬ್ರಹ್ಮಕಲಶ. ಗರ್ಭಗುಡಿ ದೇವರಿಗೆ ಸ್ಥೂಲ ಶರೀರವಿದ್ದಂತೆ. ಶರೀರಕ್ಕೆ ತೊಂದರೆ ಆದಾಗ ಔಷಧಿ ಪಡೆಯುವಂತೆ ಗರ್ಭಗುಡಿ ಶಿಥಿಲ ಆದಾಗ ಜೀರ್ಣೋದ್ಧಾರ ಮಾಡಬೇಕು ಎಂದ ಅವರು, ಪ್ರಾಚೀನತೆಯನ್ನು ಅಳವಡಿಸಿಕೊಂಡು ಜೀರ್ಣೋದ್ಧಾರ ಆಗಿದೆ. ಜನರ ಸಂಪರ್ಕ ದೇವಸ್ಥಾನದೊಂದಿಗೆ ನಿರಂತರವಾಗಿರಬೇಕು ಎಂದು ನುಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ದ್ವಾರಕಾ ಕನ್ ಸ್ಟ್ರಕ್ಷನ್ ಮ್ಹಾಲಕ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಮಾತನಾಡಿ, ಕಾರ್ಪಾಡಿ ಯಲ್ಲಿ ಸುಬ್ರಹ್ಮಣ್ಯನಿಗೆ ಸುಂದರ ದೇಗುಲ ನಿರ್ಮಾಣಗೊಂಡಿದೆ. ನಮ್ಮಿಂದ ಸಾಧ್ಯವಾದಷ್ಟು ಜೋಡಿಸಿಕೊಂಡಿದ್ದೇವೆ. ಸಾಂಸ್ಕೃತಿಕ, ವೈದಿಕ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದಿದೆ ಎಂದರು.
ವಿದ್ಯಾಮಾತ ಫೌಂಡೇಶನ್ ನ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮಾತನಾಡಿ, ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಸಭೆ ಸುಮ್ಮನೆ ನಡೆಸುವುದಿಲ್ಲ. ಅಲ್ಲಿ ಧಾರ್ಮಿಕ ಜಾಗೃತಿ, ಚಿಂತನೆ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಯೋಚಿಸಬೇಕು. ಪ್ರತಿ ಮನೆಗಳಲ್ಲಿಯೂ ಬ್ರಹ್ಮಕಲಶ ಆಗಬೇಕಾದ ಸನ್ನಿವೇಶವಿದೆ ಎಂದರು.
ಉದ್ಯಮಿ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ಬ್ರಹ್ಮಕಲಶೋತ್ಸವದಲ್ಲಿ ಸುಚಿತ್ವಕ್ಕೆ ಬಹಳಷ್ಟು ಆದ್ಯತೆ ನೀಡಿರುವುದಕ್ಕೆ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಬಹುಸಂಖ್ಯಾತರಾಗಿರುವ ಹಿಂದುಗಳಿಗೆ ದೇಶದಲ್ಲಿ ಬದುಕಲು ಕಷ್ಟವಿದೆ. ಹೀಗಾಗಿ ಹಿಂದುಗಳಿಗೆ ಬದುಕಲು ಪೂರಕವಾದ ಬಲವಾದ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎ.ಪಿ. ಸತೀಶ್ ಮಾತನಾಡಿ, ಊರಿನ ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ಜೀರ್ಣೋದ್ಧಾರ ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸಿದ್ದಾರೆ. ಅವರ ತ್ಯಾಗ, ಪರಿಶ್ರಮ ಲೆಕ್ಕಹಾಕಲು ಸಾಧ್ಯವಿಲ್ಲ. ತನು, ಮನಗಳಿಂದ ಅರ್ಪಿಸಿಕೊಂಡಿದ್ದಾರೆ. ಜೀರ್ಣೋದ್ಧಾರ ವೆಚ್ಚದ ಅರ್ಧ ಭಾಗ ಕರಸೇವೆಯ ಮೂಲಕ ನಡೆದಿದೆ ಎಂದರು.
ಪುತ್ತೂರು ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅಶೋಕ್ ಪ್ರಭು, ಹರೀಶ್ ಪೂಜಾರಿ ಉದ್ಯಂಗಲ ಸಂದರ್ಭೋಚಿತವಾಗಿ ಮಾತನಾಡಿದರು. ಜಗದೀಶ ಪೂಜಾರಿ ಕೂರೇಲು, ಉದ್ಯಮಿ ಜಗನ್ಮೋಹನ ರೈ ಸೂರಂಬೈಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಮ ಭಟ್ ಮಚ್ಚಿಮಲೆ, ಕೃಷ್ಣ ನಾಯಕ್ ಮರಕ್ಕ, ಸತೀಶ್ ಮಡಿವಾಳ, ವಲಯ ಅರಣ್ಯಾಧಿಕಾರಿ ಕಿರಣ್, ರಾಧಾಕೃಷ್ಣ ನಾಯಕ್, ರಂಗನಾಥ ಕಾರಂತ ಮರಿಕೆ, ರಾಮಕೃಷ್ಣ ಭಟ್ ಬಂಗಾರಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಾಂತಪ್ಪ ಪೂಜಾರಿ ಕಾರ್ಪಾಡಿ, ಕ್ರೀಡಾ ಕ್ಷೇತ್ರದ ಸಾಧಕ ಸುಶಾನ್ ಪ್ರಕಾಶ್ ಕೆ.ಆರ್, ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮನ್ವಿ ಯು.ರೈ, ಹಾಗೂ ಅನಿಕಾ ರಶ್ಮೀ ಕೃಷ್ಣ ಸನ್ಮಾನಿಸಲಾಯಿತು.
ದೀಕ್ಷಾ ಎ., ರಕ್ಷಾ, ಭವ್ಯ, ದೀಕ್ಷಾ ಪ್ರಾರ್ಥಿಸಿದರು. ಕಾರ್ಯಾಲಯ ಸಮಿತಿ ಸಹ ಸಂಚಾಲಕಿ ಚಂದ್ರಕಲಾ ರವಿಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಭಾರತಿ ಸಾಂತಪ್ಪ ಪೂಜಾರಿ ಕಾರ್ಪಾಡಿ ದಂಪತಿ ಫಲ, ಪುಷ್ಪ ನೀಡಿ ಸ್ವಾಮಿಜಿಯವರನ್ನು ಗೌರವಿಸಿದರು. ವಿಠಲ ರೈ ಮೇರ್ಲ, ಹರೀಶ್ ನಾಯಕ್ ವಾಗ್ಲೆ, ಧನುಷ್ ಹೊಸಮನೆ, ಕಿಶೋರ್ ಗೌಡ ಮರಿಕೆ, ಜಗನ್ನಾಥ ರೈ ತೊಟ್ಲ, ಬಾಲಕೃಷ್ಣ ಗೌಡ ಬಾರಿಕೆ, ರಕ್ಷಿತ್, ಮೋಹನ್ ಭಂಡಾರಿ, ಸಂತೋಷ್ ಪರನೀರು, ಶ್ರೇಯಸ್, ರಮೇಶ್ ಕಾಯರಹ, ರಾಧಾಕೃಷ್ಣ ನಾಯ್ಕ ಮುಂಡೂರು, ರಘುನಾಥ ಪೂಜಾರಿ ಉದ್ಯಂಗಳ, ಮೋಹನ್ ಸಿಂಹವನ ಅತಿಥಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ವಿಂದ್ಯಾಶ್ರೀ ಸನ್ಮಾನಿತರ ಪರಿಚಯ ಮಾಡಿದರು. ರಾಜೇಶ್ ಬನ್ನೂರು ಹಾಗೂ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ ವಂದಿಸಿದರು.
ವೈದಿಕ, ತಾಂತ್ರಿಕ ವಿಧಿವಿಧಾನಗಳು:
ಬೆಳಿಗ್ಗೆ ಕ್ಷೇತ್ರದಲ್ಲಿ ಉಷಃಪೂಜೆ, ಅಂಕುರ ಪೂಜೆ, ಮಹಾಗಣಪತಿ ಹೋಮ, ಸೃಷ್ಟಿತತ್ವ ಹೋಮ, ತತ್ವಕಲಶಪೂಜೆ, ತತ್ವಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಮಧ್ಯಾಹ್ನ ಆಶ್ಲೇಷಾ ಬಲಿ, ಮಹಾಪೂಜೆ, ಸಂಜೆ ಅನುಜ್ಞಾ ಬಲಿ, ದುರ್ಗಾಪೂಜೆ, ಬಿಂಬ ಶುದ್ಧಿ, ಕಲಶಪೂಜೆ, ಅಧಿವಾಸ ಹೋಮ, ಕಲಶಾಧಿವಾಸ ನಡೆಯಿತು. ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂಡಳಿ, ಬಲ್ನಾಡು ದುರ್ಗಾಶ್ರೀ ಮಹಿಳಾ ಭಜನಾ ಮಂಡಳಿ, ಪರಿಗೇರಿ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ, ಮಂತ್ರಾಲಯ ದಾಸ ಸಾಹಿತ್ಯ ಟ್ರಸ್ಟ್ ಪ್ರಾಜೆಕ್ಟ್ ಕಾಸರಗೋಡು ಇವರಿಂದ ಭಜನೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸುಸ್ವರ ಮೆಲೋಡಿಸ್ ನವರಿಂದ ಭಕ್ತಿ- ಭಾವ-ಸಂಗಮ, ಮುಂಡೂರು ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಾಯಿ ಕಲಾ ಯಕ್ಷ ಬಳಗ ಬಾಲವನ ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.