ಬಡಗು ತಿಟ್ಟಿನ  ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಉಡುಪಿ: ಬಡಗುತಿಟ್ಟಿನ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ  ಅಲ್ಪಕಾಲದ  ಅಸೌಖ್ಯದಿಂದಾಗಿ ಇಂದು ಮುಂಜಾನೆ ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ.

ಕಾಳಿಂಗ ನಾವಡರ  ಬಳಿಕ  ಯಕ್ಷಗಾನ ಭಾಗವತಿಕೆಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿದ್ದ ಧಾರೇಶ್ವರ ತನ್ನ ಮಧುರ ಕಂಠದಿಂದ ವರ್ಷಗಳ ಕಾಲ ಯಕ್ಷಗಾನ ಪ್ರೇಮಿಗಳನ್ನು ರಂಜಿಸಿದ್ದರು. ಅವರಿಗೆ 67 ವರ್ಷ ಪ್ರಾಯವಾಗಿತ್ತು.

ಯಕ್ಷಗಾನ ರಂಗ ಕಂಡ ಅತ್ಯಂತ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು.































 
 

ಪೆರ್ಡೂರು ಮೇಳವೊಂದರಲ್ಲೇ  28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು  ಮೇಳ ಸೇರಿದ್ದರು.

ಸಾಮಾಜಿಕ ಪ್ರಸಂಗಗಳಲ್ಲಿ ಹೆಚ್ಚು ಮಿಂಚಿದ್ದರೂ ಪೌರಾಣಿಕ  ಪ್ರಸಂಗಗಳಲ್ಲು ಪಳಗಿದ ಭಾಗವತರಾಗಿದ್ದರು. ಅವರ ಭಾಗವತಿಕೆಗೆ ಶಾಸ್ತ್ರೀಯ ಸಂಗೀತದ  ಲೇಪವಿತ್ತು. ಜಾನಪದ, ಭಾವಗೀತೆಗಳನ್ನು ಭಾಗವತಿಕೆಗೆ ಅಳವಡಿಸಿ ಪ್ರಯೋಗ ಮಾಡಿದ್ದರು.

1957ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ  ನೀಡುತ್ತಿದ್ದರು. ಬಳಿಕ ಎಲೆಕ್ನಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆ ಮಾಡುತ್ತಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪರರ ಮೂಲಕ ರಂಗಸ್ಥಳದ  ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ಮಾಡುವ ಮೂಲಕ ರಂಗಮಾಂತ್ರಿಕ  ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು. ಮೇಳ ಬಿಟ್ಟು 10 ವರ್ಷದ ಬಳಿಕ ಮತ್ತೆ ಪೆರ್ಡೂರು ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ  ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಸ್ವರ ಮಾಧುರ್ಯದಿಂದಲೇ ಅಪಾರ ಅಭಿಮಾನಿ  ಬಳಗವನ್ನು ಹೊಂದಿದ್ದ ಧಾರೇಶ್ವರ  ಅಗಲಿಕೆ ಯಕ್ಷಗಾನ ಲೋಕಕ್ಕೆ ಆಘಾತ ನೀಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top