ಪುತ್ತೂರು: ಸಮಾಜದಲ್ಲಿ ನಿಯತ್ತಿನಿಂದ ಬದುಕಲು ಧರ್ಮ ಹುಟ್ಟಿಕೊಂಡಿದೆ. ಜಗತ್ತಿನ ಸಕಲ ಜೀವ ರಾಶಿಗಳಿಗೂ ಬದುಕುವ ಆಸೆಯಿದೆ. ಎಲ್ಲರೊಂದಿಗೆ ಸೇರಿಕೊಂಡು ಉತ್ತಮ ಬದುಕು ಸಾಗಿಸುವುದೇ, ಇನ್ನೊಬ್ಬರ ಹಿತವಾಗಿ ಬದುಕುವುದು, ಸ್ವಾರ್ಥ ರಹಿತವಾಗಿ ಬದುಕುವುದೇ ಧರ್ಮ. ಸಮಾಜದಲ್ಲಿ ಸಕಲ ಜೀವರಾಶಿಗಳಿಗೂ ಬದುಕಲು ಅವಕಾಶ ನೀಡುವುದೇ ಧರ್ಮ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.
ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಏ.22 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವರಲ್ಲಿ ನಂಬಿಕೆಯಿರಬೇಕು. ನಂಬಿಕೆಯಿದ್ದರೆ ಧರ್ಮ ಉಳಿಯಬಹುದು. ಧರ್ಮ ಉಳಿಸಲು ಶ್ರದ್ಧಾ ಕೇಂದ್ರಗಳ ಸ್ಥಾಪನೆಯಾಗಿದೆ. ಧರ್ಮ ಉಳಿದರೆ ಶ್ರದ್ಧಾ ಕೇಂದ್ರಗಳು ಉಳಿಯಬಹುದು. ಇದಕ್ಕಾಗಿ ಶ್ರದ್ಧಾ ಕೇಂದ್ರಗಳನ್ನು ಉಳಿಸುವ ಹೊಣೆ ನಮ್ಮ ಮೇಲಿದೆ ಎಂದು ನುಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನದಲ್ಲಿ ರಾಜಕೀಯವಿರಬಾರದು. ಚಪ್ಪಲಿ ಕಳಚಿಟ್ಟು ಬರುವಂತೆ ರಾಜಕೀಯ ಬಿಟ್ಟು ದೇವಸ್ಥಾನಕ್ಕೆ ಬರಬೇಕು. ಹಿಂದು ಧರ್ಮದಲ್ಲಿ ಒಂದೇ ತಾಯಿ ಮಕ್ಕಳಂತೆ ಇದ್ದರೆ ಮಾತ್ರ ದೇವರ ಅನುಗ್ರಹ ಪಡೆಯಬಹುದು. ಜಾಗ ಖರೀದಿಸಿ ಅಡಿಸ್ಥಳ ಭದ್ರಗೊಳಿಸಿಕೊಂಡು ಜೀರ್ಣೋದ್ಧಾರ, ಬ್ರಹ್ಮಕಲಶ ಮಾಡಿರುವ ಕಾರ್ಪಾಡಿ ದೇವಸ್ಥಾನದ ಮಹಾ ಸಾಧನೆಗೆ ಅಭಿನಂದನೆ ಸಲ್ಲಿಸಿದ ಅವರು, ದೇವಸ್ಥಾನಕ್ಕೆ ಈಗಾಗಲೇ ರೂ.10 ಲಕ್ಷ ಅನುದಾನ ನೀಡಲಾಗಿದೆ. ರಸ್ತೆ, ಸೇತುವೆಗೆ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು ಅದನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು. ಬ್ರಹ್ಮಕಲಶೋತ್ಸವ ದ ಅನ್ನದಾನಕ್ಕೆ ರೂ.1ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು.
ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ ದೀಪ ಬೆಳಗಿಸಿ ಮಾತನಾಡಿ, ಪ್ರತಿಯೊಂದು ಕಡೆ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ನಡೆಯುತ್ತಿದೆ. ಆದರೆ ಸರ್ಕಾರದ ಮೂಲಕ ನಡೆಯುವ ವ್ಯವಸ್ಥಾಪನಾ ಸಮಿತಿಯಲ್ಲಿ ದೇವಸ್ಥಾನದ ಮುಖ ನೋಡದವರನ್ನು ಆಯ್ಕೆ ಮಾಡುತ್ತಿರುವುದರಿಂದ ದೇವಸ್ಥಾನ ಅಧಪತನದತ್ತ ಸಾಗುತ್ತಿದೆ. ದೇವಸ್ಥಾನಗಳು ರಾಜಕೀಯ ರಹಿತವಾಗಿರಬೇಕು. ಇದಕ್ಕಾಗಿ ಭಕ್ತಾದಿಗಳು ದೇವಸ್ಥಾನದಲ್ಲಿ ಒಟ್ಟು ಸೇರಿ ಸರಕಾರದ ನಿಯಮದಂತೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಬೇಕು. ಅವರ ಮೂಲಕ ದೇವಸ್ಥಾನದ ಅಭಿವೃದ್ಧಿಯಾಗಬೇಕು ಎಂದರು.
ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ದೇವಸ್ಥಾನಗಳೆಂದರೆ ನಮ್ಮ ಮನಸ್ಸಿನಲ್ಲಿ ಸಂಸ್ಕಾರ ಅರಳಿಸುವ, ಸಂಸ್ಕಾರಯುತ ಜನರನ್ನು ನಿರ್ಮಿಸುವ ಕೇಂದ್ರವಾಗಬೇಕು. ಅಂತಹ ಅನುಭವವನ್ನು ಕಾರ್ಪಾಡಿ ಬ್ರಹ್ಮಕಲಶೋತ್ಸವದ ಸ್ವಯಂಸೇವಕರ ಸೇವೆಯಲ್ಲಿ ಕಂಡಿದ್ದೇನೆ ಎಂದರು.
ಬಜರಂಗದಳದ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಂಗಳೂರು ಅಮ್ಟಾಡಿ ಶ್ರೀ ಅಣ್ಣಪ್ಪ ಪಂಜುರ್ಲಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಬಡಾಜೆಗುತ್ತು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವರಾಮ ಆಳ್ವ, ಮುರಳೀಧರ ಭಟ್ ಅಯೋಧ್ಯೆ ಮುಂಡೂರು, ಉದ್ಯಮಿ ಜಯಕುಮಾರ್ ನಾಯರ್, ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ರಮಣ ಭಟ್ ಹಾರಕರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಯತೀಂದ್ರನಾಥ ಶಿವಗಿರಿ ಆರ್ಯಾಪು, ಹದಿನೇಳು ವರ್ಷಗಳ ಕಾಲ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ ಅನಂತಯ್ಯ ಕಾರಂತ, ದೈವ ನರ್ತಕ ನೇಮು ಪರವರವರನ್ನು ಸನ್ಮಾನಿಸಲಾಯಿತು.
ಪ್ರಣವಿ, ತನ್ವಿ, ತೃಷಾ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಸ್ವಾಗತಿಸಿದರು. ರಾಧಾಕೃಷ್ಣ ಬೋರ್ಕರ್ ದಂಪತಿ ಸ್ವಾಮೀಜಿಯವರನ್ನು ಫಲ ಪುಷ್ಪ ನೀಡಿ ಗೌರವಿಸಿದರು. ದೇವಯ್ಯ ಗೌಡ ದೇವಸ್ಯ, ಧನಂಜಯ ಮೇರ್ಲ, ಸುರೇಶ್ ಕಬ್ಬಿನಹಿತ್ತಿಲು, ಶ್ರೀಧರ ರೈ ಮೇರ್ಲ, ಆನಂದ ಕೊಟ್ಲಾರು, ಸಂತೋಷ್ ರೈ ತೊಟ್ಲ, ಗಂಗಾಧರ ಕಲ್ಕೋಟೆ, ಆಭಿಲಾಷ್ ರೈ ಬಂಗಾರಡ್ಕ, ಯಶೋಧರ ಗೌಡ, ನಾಗರಾಜ ನಡುಮನೆ, ಪ್ರಜ್ವಲ್ ರೈ ತೊಟ್ಲ, ವಿಜಯ ಬಿ.ಎಸ್. ಅತಿಥಿಗಳಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಶಿಕ್ಷಕ ಉದಯ ಕುಮಾರ್ ರೈ ಎಸ್. ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ಕೈಕಾರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಪ್ರಾರ್ಥನಾ ಬಿ. ಮತ್ತು ಅನುರಾಧ ಬಿ. ಬಳಗದವರಿಂದ ಸಂಗೀತ ರಸಮಂಜರಿ, ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಪ್ರಸ್ತುತ ಪಡಿಸುವ ವಿಸ್ಮಯ ಜಾದೂ ಪ್ರದರ್ಶನ ನಡೆಯಿತು.
ವೈದಿಕ, ತಾಂತ್ರಿಕ ಕಾರ್ಯಕ್ರಮಗಳು:
ಬೆಳಿಗ್ಗೆ ಕ್ಷೇತ್ರದಲ್ಲಿ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಚತುಃಶುದ್ಧಿ, ಧಾರೆ, ಅವಗಾಹ, ಪಂಚಕ ಬಿಂಬ ಶುದ್ಧಿ, ಖನನಾದಿ ಸ್ಥಳಶುದ್ಧಿ, ದಹನ ಪ್ರಾಯಶ್ಚಿತ್ತ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಮಧ್ಯಾಹ್ನ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಅಂಕುರ ಪೂಜೆ, ದುರ್ಗಾಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಭಜನಾ ಕಾರ್ಯಕ್ರಮದಲ್ಲಿ ಸ್ಕಂಧ ಭಜನಾ ಮಂಡಳಿ ಕಾರ್ಪಾಡಿ, ಶ್ರೀಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ವಿಷ್ಣುಮೂರ್ತಿ ಭಜನಾ ಮಂಡಳಿ ಪಾಲಿಂಜೆ, ಮುತ್ತು ಮಾರಿಯಮ್ಮ ಮತ್ತು ರಾಮಕೃಷ್ಣ ಭಜನಾ ಮಂಡಳಿ ಅರಿಯಡ್ಕ ಇವರಿಂದ ಭಜನೆ ನಡೆಯಿತು