ಮಂಗಳೂರು : ಭಾರತೀಯ ಭೂ ಸೇನೆಯಲ್ಲಿ ಪ್ರತಿದಾಳಿ ಕಾರ್ಯಾಚರಣೆಗೆ ಹೆಸರಾಗಿರುವ “ಗೂರ್ಖಾ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಅಲ್ಲದೆ, ‘ಮಂಗಳೂರು ಲಿಟ್ ಫೆಸ್ಟ್’ ಆಯೋಜಿಸುವ ಮೂಲಕ ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆ ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ. ಹೀಗೆಂದು ಪ್ರಧಾನಿ ನರೇಂದ್ರ ಮೋದಿಯವರು ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪತ್ರದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಜಿಲ್ಲೆಯ ಜನರ ಆಶೀರ್ವಾದ ಪಡೆದು ನೀವು ಪಾರ್ಲಿಮೆಂಟಿಗೆ ಬರುತ್ತೀರಿ ಅನ್ನುವ ಸಂಪೂರ್ಣ ನಂಬಿಕೆ ನನಗಿದೆ. ನಿಮ್ಮಂತಹ ಸದಸ್ಯರು ನನ್ನ ಜತೆಗಿರುವುದು ದೊಡ್ಡ ಆಸ್ತಿ ಎಂದುಕೊಳ್ಳುತ್ತೇನೆ. ದೇಶ ಮತ್ತು ನಿಮ್ಮ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಮ್ಮ ತಂಡವು ಸದಾ ಬದ್ಧತೆ ಹೊಂದಿರುತ್ತದೆ. ಈ ಪತ್ರದ ಮೂಲಕ, ದ.ಕ. ಜಿಲ್ಲೆಯ ಜನರಿಗೆ ತಿಳಿಯಪಡಿಸುವುದು ಏನೆಂದರೆ, ಈ ಬಾರಿಯ ಚುನಾವಣೆ ಸಾಮಾನ್ಯ ರೀತಿಯದ್ದಲ್ಲ. ದೇಶದ ಜನತೆ ಅದರಲ್ಲೂ ಹಿರಿಯ ನಾಗರಿಕರು ಕಳೆದ ಐದಾರು ದಶಕಗಳಲ್ಲಿ ಅನುಭವಿಸಿದ ಕಷ್ಟಗಳೇನು ಎಂಬುದನ್ನು ತಿಳಿದು ಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಹಿಂದಿನ ಕಪ್ಪಗಳು ಕಳೆದು ದೇಶದ ಪ್ರತೀ ನಾಗರಿಕನ ಜೀವನ ಮಟ್ಟ ಸುಧಾರಣೆಯಾಗುತ್ತಿದೆ. ದೇಶದಲ್ಲಿ ಆಗಬೇಕಾದ ಕೆಲಸ ಇನ್ನೂ ಇದ್ದು, ಈ ಬಾರಿಯ ಚುನಾವಣೆ ನಮ್ಮ ಗುರಿ ಸಾಗಿಸುವಲ್ಲಿ ಮಹತ್ತರ ಘಟ್ಟವಾಗಿದೆ. ಬಿಜೆಪಿಗೆ ಕೊಡುವ ಪ್ರತಿ ಮತವೂ ಸ್ಥಿರ ಸರಕಾರ ರೂಪಿಸುವಲ್ಲಿ ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿಸುವಲ್ಲಿ ಮಹತ್ತರ ಕೊಡುಗೆ ನೀಡಲಿದೆ. ಈ ಮಹತ್ತರ ಗುರಿ ಸಾಧಿಸುವಲ್ಲಿ ದೇಶದ ಜನತೆ ಸ್ವಯಂಪ್ರೇರಿತವಾಗಿ ನಮ್ಮ ಜೊತೆಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಮತ್ತು ಈ ಚುನಾವಣೆ ಮೂಲಕ ದೇಶವನ್ನು ಸಮೃದ್ದವಾಗಿಸುವಲ್ಲಿ ಕೊಡುಗೆ ನೀಡಲಿದ್ದಾರೆ. ಬೇಸಗೆ ಸಮಯದಲ್ಲಿ ಚುನಾವಣೆ ಆಗುತ್ತಿರುವುದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ತಿಳಿದಿದ್ದೇನೆ. ಹಾಗಾಗಿ ಬಿಸಿಲೇರುವ ಮೊದಲೇ ಬೆಳಗ್ಗೆ ಬೇಗನೇ ಮತ ಹಾಕುವಂತೆ ಮತದಾರರಿಗೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಲೋಕಸಭಾ ಕ್ಷೇತ್ರದಲ್ಲಿ ಪ್ರತೀ ಬೂತ್ ಗೆಲ್ಲುವುದಕ್ಕಾಗಿ ನಮ್ಮ ಕಾರ್ಯಕರ್ತರು ಮತದಾರರಿಗೆ ಮತ ಹಾಕುವಂತೆ ಪ್ರೇರಣೆ ನೀಡುವುದು ಮುಖ್ಯವಾಗಿದೆ. ಪ್ರತೀ ಬೂತಿನಲ್ಲಿ ಅತಿ ಹೆಚ್ಚು ಮತ ಹಾಕಿಸಿ, ಬೂತ್ ಗೆದ್ದರೆ ಲೋಕಸಭೆ ಕ್ಷೇತ್ರವನ್ನು ಗೆಲ್ಲುವುದಕ್ಕೆ ಕೊಡುಗೆ ಕೊಟ್ಟಂತಾಗುತ್ತದೆ. ಇದೇ ವೇಳೆ, ಇತರ ಜನರಂತೆ ಪಕ್ಷದ ಕಾರ್ಯಕರ್ತರು ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕಾಗಿದೆ. ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಪ್ರತಿ ಕ್ಷಣದಲ್ಲೂ ಬದ್ಧತೆ ಹೊಂದಿದ್ದೇನೆಂದು ಪ್ರತಿ ಮತದಾರನಿಗೂ ತಿಳಿಸಲು ಇಚ್ಛಿಸುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.