ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಹಾಗೂ ಸಪರಿವಾರ ದೇವರ ಪುನರ್ ಪ್ರತಿಷ್ಠಾ ಅವ್ರಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯು ಏ.21 ರಿಂದ 28 ರ ತನಕ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬ್ರಹ್ಮಶ್ರೀ ಕಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಬ್ರಹ್ಮ ಕಲಶೋತ್ಸವದಲ್ಲಿ ಏ.21 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕ ಶಾಲೆ ಉದ್ಘಾಟನೆ, ಲಾಕರ್ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ, ಅತಿಥಿ ಕೊಠಡಿ ಉದ್ಘಾಟನೆ, ಮುಖ್ಯ ವೇದಿಕೆ ಉದ್ಘಾಟನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಸ್ವಾಗತ. ನಂತರ ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ವೈದಿಕ ತಾಂತ್ರಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದೆ.
ಧಾರ್ಮಿಕ ಉಪನ್ಯಾಸಗಳು
ಎ.21 ರಂದು ಸಂಜೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಏ.22 ರಂದು ನಂಜೆ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಏ.23 ರಂದು ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಸ್ವಾಮೀಜಿಯವರು, ಏ.24 ರಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಏ.25 ರಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಗಣ್ಯರ ಉಪಸ್ಥಿತಿಯಲ್ಲಿ ಆಶೀರ್ವಚನ ನೀಡಲಿದ್ದಾರೆ. ಏ.26 ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಕಮ್ಮಿಂಜೆ ಕಾರ್ತಿಕ್ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಏ.26 ರಂದು ಪ್ರಾತಃಕಾಲ ಮಹಾಗಣಪತಿ ಹೋಮ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿಪೂಜೆ, ಅಗ್ನಿಜನನ, ಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ಅಲ್ಪಪ್ರಸಾದ ಶುದ್ದಿ, ಪ್ರಾಸಾದ ಪ್ರತಿಷ್ಠೆ ಮೊದಲಾದ ವೈಧಿಕ ಕಾರ್ಯಕ್ರಮಗಳು ನಡೆದು 9.24 ರಿಂದ 10.15 ರ ವರೆಗೆ ನಡೆಯುವ ಮಿಥುನ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಪುನಃಪ್ರತಿಷ್ಠೆ, ಗಣಪತಿ, ದುರ್ಗಾದೇವಿ ಪ್ರತಿಷ್ಠೆ ಅಪ್ಪಬಂಧಕ್ರಿಯೆ, ಕುಂಭೇಶಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಮೊದಲಾದವು ನಡೆಯಲಿದೆ.
ಏ.27 ರಂದು ಬ್ರಹ್ಮಕಲಶಾಭಿಷೇಕ :
ಏ.27 ರಂದು ಬೆಳಗ್ಗೆ ಮಹಾಗಣಪತಿ ಹೋಮ, ಪಂಚಾಮೃತಾಭಿಷೇಕ, ಇಂದ್ರಾದಿ ದಿಕ್ಷಾಲ ದೇವತೆಗಳ ಪ್ರತಿಷ್ಠೆ, ಮಹಾಬಲಿಪೀಠ ಪ್ರತಿಷ್ಠೆ, ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ರಾತ್ರಿ ರಂಗಪೂಜೆ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಸಾರ್ವಜನಿಕ ಕಟ್ಟೆ ಪೂಜೆಗಳು ನಡೆಯಲಿದೆ.
ಏ.28 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ತುಲಾಭಾರ, ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ವ್ಯಾಘ್ರಚಾಮುಂಡಿ ಹಾಗೂ ಗುಳಿಗ ದೈವಗಳ ನೇಮೋತ್ಸವ, ಏ.29 ಹಾಗೂ 30 ರಂದು ಉಳ್ಳಾಲ್ತಿ, ಉಳ್ಳಾಕ್ಲು ಮತ್ತು ಸಪರಿವಾರ ದೈವಗಳಿಗೆ ನೇಮೋತ್ಸವದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.
ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನ ತನಕ ವಿವಿಧ ಭಜನಾ ತಂಡಗಳಿಸಿದ ಭಜನೆ ನಡೆಯಲಿದೆ. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿ ದಿನವೂ ಸಾಂಸ್ಕೃತಿಕ ವೈವಿಧ್ಯಗಳಿರಲಿವೆ ಎಂದು ಮಾಹಿತಿ ನೀಡಿದರು.
ಹಸಿರು ಹೊರಕಾಣಿಕೆ ಸಮರ್ಪಣೆ
ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ತಾಲೂಕಿನ ವಿವಿಧ ಭಾಗಗಳಿಂದ ಸಂಗ್ರಹಗೊಗಿಡ ಹೊರಕಾಣಿಕೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಜಮಾವಣೆಗೊಂಡು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸಾಗಿತು.
ದೈವಜ್ಞ ಮುರಳೀಧರ ತಂತ್ರಿ ಬೈಲೂರು ಉಡುಪಿ ಇವರಿಂದ ಅಪ್ರಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳರವರ ವಾಸ್ತು ಸಲಹೆಯಂತೆ ಜೀರ್ಣೋದ್ಧಾರ ಕಾರ್ಯಗಳು ನೆರವೇರಿದೆ. ನಾಗ ಸಾನಿಧ್ಯವೂ ಈಗಾಗಲೇ ನಿರ್ಮಾಣಗೊಂಡು ಪ್ರತಿಷ್ಠಾಪನಾ ಕಾರ್ಯಗಳು ನಡೆದಿದೆ. ಸುತ್ತು ಪೌಳಿ, ಗಣಪತಿ ಗುಡಿ, ಶ್ರೀ ದುರ್ಗಾದೇವಿ ಗುಡಿ, ವ್ಯಾಘ್ರಚಾಮುಂಡಿ ಗುಡಿ, ಗುಳಿಗನ ಕಟ್ಟೆ, ವಸಂತ ಮಂಟಪ ಯಾಗ ಶಾಲೆ ಹಾಗೂ ಪಾಕ ಶಾಲೆ, ಗರ್ಭಗುಡಿ ಹಾಗೂ ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಕೆ, ಜೊತೆಗೆ ದೇವಳದ ಎದುರಿನ ತೋಡಬದಿಗೆ ಬೃಹತ್ ಮೋರಿ ಅಳವಡಿಸಿ ಎದುರಿನ ಅಂಗಣ ವಿಸ್ತರಣೆ ಸೇರಿದಂತೆ ಸುಮಾರು ರೂ.೨.೫೦ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯಗಳು ಪೂರ್ಣಗೊಂಡಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ಸಂಚಾಲಕ ಸುಧಾಕರ ರಾವ್ ಆರ್ಯಾಪು, ಡಾ.ಸುರೇಶ್ ಪುತ್ತೂರಾಯ ಉಪಸ್ಥಿತರಿದ್ದರು.