ಸುಳ್ಯ : ದೇಶದ ಭವಿಷ್ಯದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ, ಕಾರ್ಯಕರ್ತರು, ನಾಯಕರು ಒಟ್ಟಾಗಿದ್ದು ಈ ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಅವರು ಸುಳ್ಯದಲ್ಲಿ ನಡೆದ ಕಾಂಗ್ರೆಸ್ ರೋಡ್ ಶೋ ದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ಸರಕಾರ ಅನುಷ್ಠಾನಗೊಂಡ ನೂರು ದಿನಗಳ ಒಳಗೆ ಜಾರಿಗೊಳಿಸಿದೆ. ಕೇಂದ್ರದಲ್ಲಿಯೂ ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಜಾರಿಗೆ ತರಲಿದೆ. ಈ ಬಾರಿ ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮಾತನಾಡಿ , ಬಿಜೆಪಿಯು ರಾಷ್ಟ್ರ ಪ್ರೇಮಿಗಳು ಮತ್ತು ದೇಶ ದ್ರೋಹಿಗಳ ಚುನಾವಣೆ ಅಂತ ಹೇಳ್ತಾ ಇದ್ದಾರೆ. ನಾನೊಬ್ಬ ಹಿಂದೂ ಎಂದು ಎದೆ ತಟ್ಟಿ ಹೇಳುವೆ . ಯುವಕರ ಸಾವಿಗೆ ಕಾರಣವಾಗಿ ಅವರ ಮನೆಯನ್ನು ಅನಾಥವಾಗಿ ಮಾಡಿದ್ದೆ ಬಿಜೆಪಿಗರ ಹಿಂದುತ್ವ ಎಂದು ಕಿಡಿ ಕಾರಿದರು. ಬಿಜೆಪಿಯ ಸಾಧನೆಯನ್ನು ನಾವು ಕೇಳಿದ್ದೇವೆ ಅವರು ಇದುವರೆಗೂ ಉತ್ತರ ನೀಡಿಲ್ಲ. 33ವರ್ಷಗಳಲ್ಲಿ ಮಾಡಿದ ಸಾಧನೆ ಎಂದರೆ ಕೋಮು ಸೂಕ್ಷ್ಮ ಪ್ರದೇಶವಾಗಿ ಮಾಡಿದ್ದಾರೆ. ಇಲ್ಲಿ ಉದ್ಯೋಗ ಸೃಷ್ಟಿ ಕಡಿಮೆ ಆಗಲು ಬಿಜೆಪಿಯೇ ನೇರ ಕಾರಣ ಎಂದು ಹೇಳಿದರು. ಉದ್ಯೋಗವನ್ನು ಅರಸಿಕೊಂಡು ಬೇರೆ ರಾಜ್ಯ, ದೇಶಗಳಿಗೆ ಹೊಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ಸೂಕ್ಷ್ಮ ಪ್ರದೇಶ ಎಂಬ ಟ್ಯಾಗ್ ಲೈನ್ ಇದೆ ಅದನ್ನು ಹೋಗಲಾಡಿಸಲು ನಿಮ್ಮೆಲ್ಲರ ಮತಗಳಿಂದಲೇ ಸಾಧ್ಯ. ದೇಶದ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಹಸ್ತ ಚಿಹ್ನೆಗೆ ಮತನೀಡಬೇಕಾಗಿ ವಿನಂತಿಸುತ್ತೇನೆ ಎಂದು ಹೇಳಿದರು.