ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ ಧ್ಜಜಾವರೋಹಣದೊಂದಿಗೆ ಇಂದು ಸಂಪನ್ನಗೊಂಡಿತು.
ಏ.10 ರಿಂದ ಧ್ವಜಾರೋಹಣದೊಂದಿಗೆ ಆರಂಭಗೊಂಡ ಜಾತ್ರೋತ್ಸವ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಏ.10 ರಿಂದ ಪ್ರತಿನಿತ್ಯ ಶ್ರೀ ದೇವರ ಬಲಿ ಉತ್ಸವ ನಡೆದು ಶ್ರೀ ದೇವಸ್ಥಾನದ ವಠಾರದಲ್ಲಿರುವ ಕಟ್ಟೆಯಲ್ಲಿ ಪೂಜೆಗೊಂಡ ಬಳಿಕ ಪ್ರತಿನಿತ್ಯ ನಿಗದಿಯಾದ ಪ್ರದೇಶಗಳಿಗೆ ಸವಾರಿ ಮಾಡಿ ವಿವಿಧ ಕಟ್ಟೆಗಳಲ್ಲಿ ಪೂಜೆಗೊಂಡು ಭಕ್ತಾದಿಗಳನ್ನು ಪುನೀತರಾಗಿಸುವುದು ವಿಶೇಷತೆಯಾಗಿದ್ದು, ಈ ಮೂಲಕ ಮನೆ ಬಾಗಿಲಿಗೆ ಬರುವ ದೇವರು ಎಂದೇ ಖ್ಯಾತಿ ಪಡೆದಿದ್ದಾರೆ.
ಮತ್ತೊಂದು ವಿಶೇಷತೆಯೆಂದರೆ ಏ.16 ರಂದು ದೂರದ ಬಲ್ನಾಡಿನಿಂದ ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳು ಪರಿವಾರ ದೈವಗಳೊಂದಿಗೆ ಕಿರುವಾಳು ಬರುವುದು. ಇದನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡು ಪುನೀತರಾದರೆ, ಏ.17 ರ ಬೆಳಗ್ಗೆಯ ದರ್ಶನಬಲಿ ಉತ್ಸವ, ರಾತ್ರಿ ಲಕ್ಷಾಂತರ ಭಕ್ತಾದಿಗಳ ಜಯಘೋಷದೊಂದಿಗೆ ವೈಭವದ ಬ್ರಹ್ಮ ರಥೋತ್ಸವ, ಸಿಡಿಮದ್ದು ಪ್ರದರ್ಶನ ಭಕ್ತಾದಿಗಳನ್ನು ಪುಳಕಿತಗೊಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಏ.18 ರ ಸಂಜೆ ಹೊತ್ತಿನಲ್ಲಿ ಶ್ರೀ ದೇವರು ರಕ್ತೇಶ್ವರಿ ದೈವದೊಂದಿಗೆ ಮಾತುಕತೆ ನಡೆಸಿ ಬಳಿಕ ದೂರದ ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ತೆರಳುವುದು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತಾದಿಗಳು ಶ್ರೀ ದೇವರ ಜತೆ ವೀರಮಂಗಲಕ್ಕೆ ತೆರಳುವುದನ್ನು ನೋಡಿದರೆ ಭಕ್ತ ಸಮೂಹದಲ್ಲಿ ಭಕ್ತಿಯ ಸಂಚಲವನ್ನೇ ಉಂಟು ಮಾಡುತ್ತಿದೆ. ಅವಭೃತ ಸ್ನಾನದ ಬಳಿಕ ಶ್ರೀ ದೇವರು ಪುನಃ ದೇವಸ್ಥಾನಕ್ಕೆ ಬಂದು ಧ್ವಜಾವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನ. ಇನ್ನು ಮುಂದಿನದ್ದು ಮುಂದಿನ ವರ್ಷದ ಜಾತ್ರೋತ್ಸವಕ್ಕೆ ಭಕ್ತ ಸಮೂಹದ ಕಾತರ.
ಇಂದು ರಾತ್ರಿ ದೇವಸ್ಥಾನದಲ್ಲಿ:
ಶ್ರೀ ದೇವಸ್ಥಾನದಲ್ಲಿ ಇಂದು ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ಪ್ರಾರಂಭ, ಬಳಿಕ ಹುಲಿಘೂತ, ರಕ್ತೇಶ್ವರಿ ನೇಮ ನಡೆಯಲಿದೆ. ಏ.21 ಶನಿವಾರ ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಞಣತ್ತಾಯ, ಪಂಜುರ್ಲಿ, ವಗೈರೆ ದೈವಗಳ ನೇಮೋತ್ಸವ ನಡೆಯಲಿದೆ.