ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯದ “ದಶಾಂಬಿಕೋತ್ಸವ”ದ ಸಮಾರೋಪ ಸಮಾರಂಭ ಹಾಗೂ ಸಾರ್ವಜನಿಕ ಗುರುವಂದನಾ ಏ.25 ರಂದು ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ನಡೆಯುವ ದಶಾಂಬಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಶೃಂಗೇರಿ ಮಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಬಪ್ಪಳಿಗೆಯಲ್ಲಿನ ಸಿಬಿಎಸ್‌ಇ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರಕೇಂದ್ರವೆನಿಸಿದೆ. ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಈ ಸಂಸ್ಥೆ ಹುಟ್ಟುಹಾಕಿದೆ. ಪುತ್ತೂರು ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳ ಪೈಕಿ ಈಜು ಕೊಳ ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ. ಅಂತೆಯೇ ನಿಗದಿತ ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕೊಡುವ, ಬದುಕಿನ ಅನುಭವ ಕಟ್ಟಿಕೊಡುವ ಕಾರ್ಯದಲ್ಲೂ ಅಂಬಿಕಾ ಸಂಸ್ಥೆ ತೊಡಗಿಕೊಂಡಿದೆ ಎಂದ ಅವರು, ಧಾರ್ಮಿಕ ಚಿಂತನೆ, ಶೈಕ್ಷಣಿಕ ಸಾಧನೆ ಮತ್ತು ರಾಷ್ಟ್ರಭಕ್ತಿ ಉದ್ದೀಪನಗೊಳಿಸುವ ಸಮಗ್ರ ಶಿಕ್ಷಣವನ್ನು ಜಾರಿಗೊಳಿಸಿರುವ ಅಂಬಿಕಾ ವಿದ್ಯಾಲಯ ಇದೀಗ ತನ್ನ ಹತ್ತನೆಯ ವರ್ಷದ ಸಂಭ್ರಮದಲ್ಲಿದೆ. ಆ ಪ್ರಯುಕ್ತ ’ದಶಾಂಬಿಕೋತ್ಸವ’ ಹೆಸರಿನಲ್ಲಿ ವರ್ಷಪೂರ್ತಿ ನಾನಾ ಬಗೆಯ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ:
ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಪಾದಪೂಜೆ, ಫಲಸಮರ್ಪಣೆ, ಭಿಕ್ಷಾವಂದನೆಗೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಭಿವಂದನಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ವಿವಿಧ ಸಮುದಾಯದ ಸಂಘಗಳ ಪದಾಧಿಕಾರಿಗಳು, ಮುಖಂಡರನ್ನೊಳಗೊಂಡಂತೆ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಶ್ರೀ ಗುರುಗಳ ಅಭಿವಂದನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಶೃಂಗೇರಿಯ ಭಕ್ತವರ್ಗವಾದ ವಿವಿಧ ಸಮುದಾಯಗಳ ವತಿಯಿಂದ ಪ್ರತ್ಯೇಕ ಪ್ರತ್ಯೇಕವಾಗಿ ಗುರುವಂದನಾ ಕಾರ್ಯಕ್ರಮ – ಫಲಸಮರ್ಪಣೆ, ಭಿಕ್ಷಾವಂದನೆ ನಡೆಯಲಿದೆ. ಪಾದಪೂಜೆಗೂ ವಿಶೇಷ ಅವಕಾಶ ಕಲ್ಪಿಸಿಕೊಡಲಾಗಿದೆ. ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಎಲ್ಲಾ ಭಕ್ತಾದಿಗಳಿಗೂ ಶ್ರೀ ಗುರುಗಳು ಮಂತ್ರಕಾಕ್ಷತೆ ನೀಡಿ ಹರಸಲಿದ್ದಾರೆ. ಮಂತ್ರಾಕ್ಷತೆಯ ಬಳಿಕ ನೆರೆದ ಎಲ್ಲಾ ಭಕ್ತಾದಿಗಳಿಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಶ್ರೀ ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ಸರಸ್ವತೀ ಹೋಮ:
ಅಂದು ಬೆಳಿಗ್ಗೆ 9 ಗಂಟೆಗೆ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಸರಸ್ವತಿ ಹೋಮದ ಪೂರ್ಣಾಹುತಿ ನಡೆಯಲಿದೆ. ಏ.24 ರಂದು ಶ್ರೀ ಗುರುಗಳ ಆಗಮನವಾಗಲಿದ್ದು, ಅವರ ದಿವ್ಯ ಹಸ್ತರಿಂದ ರಾತ್ರಿ 8 ರಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮಜ್ಜಗದ್ಗುರು ಅಭಿನಂದನಾ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಬಿ. ಐತಪ್ಪ ನಾಯ್ಕ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷೆ ಸೀಮಾ ನಾಗರಾಜ್ ಉಪಸ್ಥಿತರಿದ್ದರು.