ಪುತ್ತೂರು: ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮ ರಥೋತ್ಸವ ಬುಧವಾರ ರಾತ್ರಿ ವೈಭವದಿಂದ ನಡೆಯಿತು.

ನೂರಾರು ಭಕ್ತರ ಕೈಗಳು ಬ್ರಹ್ಮ ರಥೋತ್ಸವವನ್ನು ಜಯಘೋಷಗಳೊಂದಿಗೆ ರಥಬೀದಿಯಲ್ಲಿ ಎಳೆಯುವ ಮೂಲಕ ಸಾಗಿದರು. ಈ ಪುಣ್ಯ ಕ್ಷಣವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.
ಮೊದಲಿಗೆ ಒಳಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಹೊರಾಂಗಣದಲ್ಲಿ ಬಲಿ ಉತ್ಸವ ನಡೆಯಿತು. ನಂತರ ಶ್ರೀ ದೇವರು ರಥಾರೂಢರಾದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಪುತ್ತೂರು ಬೆಡಿ ಎಂಬ ಹೆಸರುವಾಸಿಯಾದ ಸುಡುಮದ್ದು ಪ್ರದರ್ಶನ ಆಕಾಶದೆತ್ತರಕ್ಕೆ ಚಿಮ್ಮಿ ಬಾನಲ್ಲಿ ಬೆಳಕಿನ ಚಿತ್ತಾರವನ್ನೇ ಸೃಷ್ಟಿಸಿತು. ಈ ರೋಮಾಂಚನ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು.
ಬಳಿಕ ವೈಭವದ ಬ್ರಹ್ಮ ರಥೋತ್ಸವ ನಡೆಯಿತು. ರಥೋತ್ಸವದ ಬಳಿಕ ಶ್ರೀ ದೇವರು ಬಂಗಾರ್ ಕಾಯರ್ ಕಟ್ಟೆಗೆ ತೆರಳಿ ಅಲ್ಲಿ ಕಟ್ಟೆಪೂಜೆಗೊಂಡ ಬಳಿಕ ಶ್ರೀ ದೇವಸ್ಥಾನಕ್ಕೆ ಆಗಮಿಸಿದರು. ನಂತರ ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳನ್ನು ಬೀಳ್ಕೊಡಲಾಯಿತು. ರಾತ್ರಿ ಶ್ರೀ ಭೂತಬಲಿ ಶಯನ ನಡೆಯಿತು.