ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಸಂದರ್ಭ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡುತ್ತಿದ್ದ ನಕಲಿ ಮಂಗಳಮುಖಿಯೊಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವ ತಿಳಿದು ಬಂದಿದೆ.
ಬ್ರಹ್ಮರಥೋತ್ಸವ ಸಂದರ್ಭ ಗದ್ದೆಯಲ್ಲಿ ನಕಲಿ ಮಂಗಳಮುಖಿಯೋರ್ವಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಲ್ಲದೆ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಇದು ಗಮನಕ್ಕೆ ಬಮದಾಗ ಸಾರ್ವಜನಿಕರ ಸಹಕಾರದೊಂದಿಗೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಚಿನ್ನದ ಸರದ ವಾರಿಸುದಾರರು ದೂರು ನೀಡಲು ರಾತ್ರಿ ಪೊಲೀಸರಲ್ಲಿ ಮಾತನಾಡಿದಾಗ ಬೆಳಿಗ್ಗೆ ಬರಲು ತಿಳಿಸಿದ್ದರು. ಇಂದು ಬೆಳಿಗ್ಗೆ ಚಿನ್ನದ ಸರದ ವಾರಿಸುದಾರರಾದ ಮಹಿಳೆ ಮತ್ತು ಮಹಿಳೆಯ ತಂದೆ ಠಾಣೆಗೆ ಹೋದಾಗ ಹಿಡಿದು ಕೊಟ್ಟ ಕಳ್ಳನನ್ನು ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಪೊಲೀಸರನ್ನು ಪ್ರಶ್ನಿಸಿದಾಗ ಪೊಲೀಸರು ಹಾರಿಕೆ ಉತ್ತರ ನೀಡಿದ್ದಾರೆಂದು ದ ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಹಿಳೆಯ ತಂದೆ ಕರೆ ಮಾಡಿ ಪೊಲೀಸರ ನಡವಳಿಕೆ ಕುರಿತು ದೂರು ನೀಡಿದ್ದಾರೆಂದು ತಿಳಿದು ಬಂದಿದೆ.