ಮಂಗಳೂರು : ಚುನಾವಣಾ ಪ್ರಚಾರ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ ಹೊಯ್ ಕೈ ಹಂತಕ್ಕೆ ತಲುಪಿದ ಘಟನೆ ಮಂಗಳೂರಿನ ಉರ್ವ ಚಿಲಿಂಬಿ ಸಾಯಿಬಾಬ ಮಂದಿರದ ಬಳಿ ನಡೆದಿದೆ.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಹೊಯ್ ಕೈ ಹಂತಕ್ಕೆ ತಲುಪಿದೆ ಎನ್ನಲಾಗಿದ್ದು, ರಾಮ ನವಮಿ ಉತ್ಸವ ನಡೆಯುತ್ತಿದ್ದ ಮಂದಿರದ ಹೊರ ಭಾಗದಲ್ಲಿರುವ
ಮುಖ್ಯ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದು, ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಾಗ್ವಾದ ತಾರಕಕ್ಕೇರಿ ನೂಕು ನುಗ್ಗಲು ಹೊಯ್ ಕೈ ಹಂತಕ್ಕೆ ತಲುಪಿದೆ.
ಸ್ಥಳಕ್ಕೆ ಶಾಸಕ ವೇದಾವ್ಯಾಸ ಕಾಮತ್, ಮಿಥುನ್ ರೈ ಆಗಮಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಮಧ್ಯೆ ಪ್ರವೇಶಿಸಿ ಗುಂಪು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.