ದುಬೈ : ದುಬೈನಲ್ಲಿ ಧಾರಾಕಾರ ಮಳೆಯು ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ (ಏಪ್ರಿಲ್ 16) ಸುರಿದ ಭಾರಿ ಮಳೆಗೆ ರಸ್ತೆ, ಮನೆ, ಮಾಲ್ ಗಳು ಜಲಾವೃತಗೊಂಡಿರುತ್ತದೆ.
ಭಾರೀ ಮಳೆಯಿಂದಾಗಿ ದುಬೈನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊಲ್ಲಿಯಲ್ಲಿ ಚಂಡಮಾರುತದಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆಗಳ ವ್ಯತ್ಯಯ ಉಂಟಾಯಿತು. ಹಲವಾರು ಗಂಟೆಗಳ ಕಾಲ ಇಲ್ಲಿಂದ ವಿಮಾನಗಳು ಟೇಕಾಫ್ ಆಗಲಿಲ್ಲ. ರನ್‌ವೇ ಮೊಣಕಾಲಿನ ಆಳದಲ್ಲಿ ನೀರಿತ್ತು. ಮಳೆಯಿಂದಾಗಿ 50ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ.
ದುಬೈ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಪ್ರವಾಹದ ನೀರಿನ ನಡುವೆ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಿ ಹೋಗಿದ್ದು ರಸ್ತೆ ಸಂಚಾರ ಕಷ್ಟ ಸಾಧ್ಯವಾಗಿದೆ.
ಮಂಗಳವಾರದಂದು ಕೇವಲ 12 ಗಂಟೆಗಳಲ್ಲಿ ವಿಮಾನ ನಿಲ್ದಾಣದಲ್ಲಿ ಸುಮಾರು 100 ಮಿಮೀ ಮಳೆಯಾಗಿದ್ದು ಒಟ್ಟು 24 ಗಂಟೆಗಳಲ್ಲಿ 160 ಮಿಮೀ ಮಳೆಯಾಗಿದ್ದು ಇದು ದಾಖಲೆಯ ಮಳೆಯಾಗಿದೆ ಎಂದು ಹೇಳಲಾಗಿದೆ.