ಪುತ್ತೂರು: ಮಿತ್ರವೃಂದ ವಾಲಿಬಾಲ್ ಅಕಾಡೆಮಿ, ಪುತ್ತೂರು ರೋಟರಿ ಕ್ಲಬ್ ಬಿರಮಲೆ ಹಿಲ್ಸ್ ಹಾಗೂ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳ ಕಾಲ ನಡೆಯುವ ಉಚಿತ ಬೇಸಿಗೆ ವಾಲಿಬಾಲ್ ತರಬೇತಿ ಶಿಬಿರ ಏ.20 ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಆರಂಭಗೊಳ್ಳಲಿದೆ ಎಂದು ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕೆಮ್ಮಿಂಜೆ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 40 ವರ್ಷಗಳಿಂದ ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಗ್ರಾಮೀಣ ಪ್ರದೇಶದ ಆಸಕ್ತರಿಗೆ ಉಚಿತವಾಗಿ ವಾಲಿಬಾಲ್ ತರಬೇತಿ ನೀಡುತ್ತಾ ಬಂದಿದ್ದು, ಹಲವಾರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡಿದೆ. ಅಲ್ಲದೆ ಬೀಚ್ ವಾಲಿಬಾಲ್ ತರಬೇತಿಯನ್ನೂ ನೀಡುತ್ತಿದೆ. ಇತ್ತೀಚೆಗೆ ಕರ್ನಾಟಕದ ಮಹಿಳಾ ತಂಡವನ್ನು ತಯಾರು ಮಾಡಿ ರಾಷ್ಟ್ರಮಟ್ಟದಲ್ಲಿ ಮಹಿಳೆಯರ ತಂಡವನ್ನು ಪ್ರತಿನಿಧಿಸುವಂತೆ ತರಬೇತಿ ನೀಡಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಏ.20 ರಂದು ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಶಿಬಿರ ಆರಂಭಗೊಳ್ಳಲಿದ್ದು, ಈ ಬಾರಿ 60 ಕ್ಕೂ ಮಿಕ್ಕಿ ಆಸಕ್ತರಿಗೆ ಮುಖ್ಯ ತರಬೇತುದಾರ ಪಿ.ವಿ.ನಾರಾಯಣನ್ ಅವರ ನೇತೃತ್ವದಲ್ಲಿ ತರಬೇತಿ ನೀಡಲಾಗುವುದು. 10 ರಿಂದ 18 ವರ್ಷದೊಳಗಿನ ಆಸಕ್ತರು ತಮ್ಮ ಹೆಸರು ನೋಂದಾಯಿಸಬೇಕೆಂದು ವಿನಂತಿಸಿದ ಅವರು, ಹೊರ ತಾಲೂಕುಗಳಿಂದ ಬಂದವರಿಗೂ ತರಬೇತಿ ನೀಡಲಾಗುವುದು. ಬೆಳಿಗ್ಗೆ ಮತ್ತು ಸಂಜೆ ಎರಡು ಹಂತದಲ್ಲಿ ತರಬೇತಿ ನೀಡಲಿದ್ದು, ಬೆಳಿಗ್ಗೆ 6.45 ರಿಂದ 8.45 ಹಾಗೂ ಸಂಜೆ 4.30 ರಿಂದ 6.30 ರ ತನಕ ತರಬೇತಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಅಧ್ಯಕ್ಷ ಪಿ.ವಿ.ಕೃಷ್ಣನ್, ಸದಸ್ಯ ಪ್ರಸನ್ನ ಕುಮಾರ್, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ಮುಖ್ಯ ತರಬೇತುದಾರ ಪಿ.ವಿ.ನಾರಾಯಣನ್ ಉಪಸ್ಥಿತರಿದ್ದರು.