ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರಿನ ‘ಶಿವಾಮೃತ’ ವಿಶೇಷ ಸಂಚಿಕೆ ಏ.15 ರಂದು ಸಂಜೆ ಲೋಕಾರ್ಪಣೆಗೊಂಡಿತು.
ಬನ್ನೂರು ಜೋಡುಕಟ್ಟೆ ಮೈದಾನದಲ್ಲಿ ನಡೆದ “ಪುತ್ತೂರ ಹಬ್ಬ” ಕಾರ್ಯಕ್ರಮದಲ್ಲಿ ಹಾವೇರಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ ಚಿನ್ನಪ್ಪ ಗೌಡ “ಶಿವಾಮೃತ” ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ. ಪ್ರಸ್ತುತ ಮಕ್ಕಳು ಸಾಂಸ್ಕೃತಿಕ ಬೇರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮನಸ್ಥಿತಿಯಿಂದ ಹೊರಗೆ ಬರಬೇಕು. ಮಕ್ಕಳನ್ನು ಬುದ್ಧಿವಂತರನ್ನಾಗಿಸುವ ಜತೆಗೆ ಸಾಂಸ್ಕೃತಿಕ ಕಲಾಪಗಳಲ್ಲಿ ಪಾಲ್ದೊಳ್ಳುವ ಮೂಲಕ ಸಾಂಸ್ಕೃತಿಕ, ಸಂಸ್ಕಾರವನ್ನು ಜೀವಂತ ಇರಿಸಬೇಕಾಗಿದೆ. ಶಿವಾಮೃತ ಸಂಚಿಕೆ ಪುಸ್ಕತ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುತ್ತಿದೆ, ನಮ್ಮ ಒಳಗನ್ನು ತಿಳಿಸುತ್ತದೆ. ಧರ್ಮ ಕೇಂದ್ರಿತ, ಆತ್ಮ ಕೇಂದ್ರಿತವಾಗಿ ಸಂಚಿಕೆ ಇದೆ ಎಂದ ಅವರು, ಧರ್ಮದ ಸಂಬಂಧಗಳನ್ನು ಅರಿತುಕೊಂಡು ಬದುಕಿದರೆ ಧರ್ಮದ ಅರ್ಥತಿಳಿಯಲು ಸಾಧ್ಯ ಎಂದರು.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಪಾರಿವಾಳ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವನ ಜಾತ್ರೋತ್ಸವ ಸಂದರ್ಭದಲ್ಲಿ ಶಿವಾಮೃತ ಬಿಡುಗಡೆ ಅರ್ಥಪೂರ್ಣ. ಸಂಚಿಕೆಯನ್ನು ಕೃತಿಯಾಗಿ ಹೊರ ಬರಲಿ, ಇನ್ನಷ್ಟು ಕಾರ್ಯಕ್ರಮಗಳು ಟ್ರಸ್ಟ್ ನಿಂದ ನಡೆಯಲಿ ಎಂದು ಶುಭ ಹಾರೈಸಿದರು,
ಉಜ್ಜೀವನ್ ಬ್ಯಾಂಕ್ ನ ಬ್ಯುಸಿನೆಸ್ ಹೆಡ್ ಪ್ರದೀಪ್ ಬಿ. ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಸೀತಾರಾಮ ಕೇವಳ ಸಂಚಿಕೆ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಹರೀಶ್ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಮುರಳೀಧರ್ ಕೆ.ಎಲ್., ಕೋಶಾಧಿಕಾರಿ ಸತೀಶ್ ಪಾಂಬಾರು, ಟ್ರಸ್ಟಿಗಳಾದ ಕೇಶವ ಅಮೈ ಕಲಾಯಿಗುತ್ತು, ಪ್ರವೀಣ್‍ಕುಂಟ್ಯಾಣ, ಯತೀಶ್ ಎನ್., ಪ್ರಸಾದ್ ಕೆ.ಎನ್., ಚಿದಾನಂದ ಬೈಲಾಡಿ, ವೆಂಕಟೇಶ್ ಭಟ್ ಕೋಯಕ್ಕುಡೆ, ಸುಶಾಂತ್ ಕೆಡೆಂಜಿ, ನ್ಯೂಸ್‍ಪುತ್ತೂರಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಮರ್ಪಣಾ ಚಾರಿಟೇಬಲ್ ನ ಟ್ರಸ್ಟಿ ವಸಂತ ಎಸ್.ವೀರಮಂಗಲ, ಕಾರ್ಯಕ್ರಮ ನಿರೂಪಿಸಿದರು. ನ್ಯೂಸ್ ಪುತ್ತೂರು ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್‍ಕೆಡೆಂಜಿ ವಂದಿಸಿದರು.