ಪುತ್ತೂರು: ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಪುತ್ತೂರಿನಿಂದ 5 ಸಾವಿರಕ್ಕೂ ಮಿಕ್ಕಿ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪುತ್ತೂರು ವಿಧಾನಸಭೆಯ ಎಲ್ಲಾ ಬೂತ್ ಗಳಿಂದ ಕಾರ್ಯಕರ್ತರು ಸ್ವ ಇಚ್ಛೆಯಿಂದ ತಮ್ಮ ತಮ್ಮ ವಾಹನದಲ್ಲಿ ಮಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ನಡೆಯುವ ಮೋದಿ ರೋಡ್ ಶೋ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 4 ಲಕ್ಷಕ್ಕೂ ಮಿಕ್ಕಿದ ಮತಗಳಲ್ಲಿ ಗೆಲ್ಲಿಸುವ ಕಾರ್ಯಕ್ರಮದ ಮುನ್ನುಡಿಯಾಗಿದ್ದು, ಕೇಂದ್ರದಲ್ಲಿ ಬಿಜೆಪಿ 400 ಕ್ಕೂ ಮಿಕ್ಕಿ ಸ್ಥಾನ ಗೆಲ್ಲಲಿದ್ದು,ಆ ಸ್ಥಾನಗಳಲ್ಲಿ ದಕ್ಷಿಣಕನ್ನಡ ಸ್ಥಾನವೂ ಒಂದಾಗಲಿದೆ ಎಂದು ತಿಳಿಸಿದ ಅವರು, ಕಾಂಗ್ರೇಸ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೋಲಿನ ಹತಾಶೆಯಲ್ಲಿದೆ. ಈವರೆಗೆ ಕಾಂಗ್ರೇಸ್ ಗೆ ಜಿಲ್ಲೆಯಲ್ಲಿ ಒಂದು ಜಿಲ್ಲಾ ಮಟ್ಟದ ಸಮಾವೇಶ ಮಾಡಲು ಸಾಧ್ಯವಾಗಿಲ್ಲ. ಪುತ್ತೂರಿನಲ್ಲಿ ಎ.16 ರಂದು ಮುಖ್ಯಮಂತ್ರಿ ಸಿದ್ಧಾರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೋಡ್ ಶೋ ನಡೆಸಲಿದ್ದಾರೆ. ಸೋಲಿನ ಹತಾಶೆ ಕಾಂಗ್ರೇಸ್ ನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೇಸ್ ಒಡೆದ ಮನೆಯಾಗಿದೆ. ಈಗಾಗಲೇ ಕಾಂಗ್ರೆಸ್ ಬಿಜೆಪಿ ವಿರುದ್ಧ ಸೋಲನ್ನು ಒಪ್ಪಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸಿಯೂ ಆಗಿದೆ ಎಂದು ಸಂಜೀವ ಮಠಂದೂರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.