ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವೈಭವದ ಜಾತ್ರೋತ್ಸವಕ್ಕೆ ಕಳೆದ ಮೂರು ದಿನಗಳ ಹಿಂದೆ ಚಾಲನೆ ನೀಡಲಾಗಿದ್ದು, ಪ್ರತಿದಿನ ರಾತ್ರಿ ಶ್ರೀ ದೇವರು ಒಂದೊಂದು ಕಡೆ ಪೇಟೆ ಸವಾರಿಗೆ ತೆರಳುವ ಮೂಲಕ ಆ ಪ್ರದೇಶದ ಭಕ್ತ ಸಮೂಹದಲ್ಲಿ ಸಂಭ್ರಮ ಮನೆ ಮಾಡಿದೆ.

ಮನೆ ಬಾಗಿಲಿಗೆ ತೆರಳು ದೇವರು ಎಂದು ಪ್ರಸಿದ್ಧಿ ಪಡೆದ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಪ್ರತಿನಿತ್ಯ ಸಂಜೆ ಶ್ರೀ ದೇವರ ಬಲಿ ಉತ್ಸವ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ನಡೆದು ಬಳಿಕ ದೇವಸ್ಥಾನದ ವಠಾರದಲ್ಲಿರುವ ಕಟ್ಟೆಯಲ್ಲಿ ಪೂಜೆಗೊಂಡು ಬಳಿಕ ನಿಗದಿಯಾದ ಪ್ರದೇಶಗಳಿಗೆ ತೆರಳುವ ಸಂಭ್ರಮದ ವಾತಾವರಣ ಉಂಟು ಮಾಡಿದೆ.

ಶ್ರೀ ದೇವರು ತೆರಳುವಾಗ ದಾರಿಯುದ್ಧಕ್ಕೂ ಸಿಗುವ ಕಟ್ಟೆಗಳನ್ನು ಸ್ಥಳೀಯರು ತಳಿರು ತೋರಣಗಳಿಂದ ಶೃಂಗರಿಸಿ ಶ್ರೀ ದೇವರಿಗೆ ಆರತಿ, ಹಣ್ಣುಕಾಯಿ, ಕಟ್ಟೆಪೂಜೆ ಅರ್ಪಿಸಿ ಪುನೀತರಾಗುತ್ತಿದ್ದಾರೆ.

ಗುರುವಾರ ರಾತ್ರಿ ಶ್ರೀ ದೇವರು ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಪ್ರದೇಶಗಳಿಗೆ ತೆರಳಿ ಕಟ್ಟೆಪೂಜೆಗೊಂಡು ತಡರಾತ್ರಿ ದೇವಸ್ಥಾನಕ್ಕೆ ಪುನಃ ಆಗಮಿಸಿತು.