ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘಕ್ಕೆ 1.65 ಕೋಟಿ ಲಾಭ

ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಸುಮಾರು 22 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕಿನಲ್ಲಿರುವ 14 ಶಾಖೆಗಳ ಮೂಲಕ ನೀಡಿಕೊಂಡು ಬರುತ್ತಿದ್ದು, 2023- 24ನೇ ಆರ್ಥಿಕ ವರ್ಷದಲ್ಲಿ ತನ್ನ ಸಂಘದ ಸದಸ್ಯರ ಸಹಕಾರದಿಂದ ಅತ್ಯುತ್ತಮ ಕಾರ್ಯದಕ್ಷತೆಯನ್ನು ಸಾಧಿಸಿ, ಸಂಘವು 728 ಕೋಟಿ ರೂ. ಗಳ ದಾಖಲೆಯ ವ್ಯವಹಾರವನ್ನು ನಡೆಸಿ ರೂ. 1.65 ಕೋಟಿ ರೂ.ಗಳಷ್ಟು ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಕೆ. ಸೀತರಾಮ ಸವಣೂರು ತಿಳಿಸಿದ್ದಾರೆ.

2023-24 ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಸಂಘದಲ್ಲಿ ಒಟ್ಟು 8524 ಸದಸ್ಯರಿದ್ದು , 3.22 ಕೋಟಿ ರೂ.ಗಳಷ್ಟು ಪಾಲು ಬಂಡವಾಳವನ್ನು ಹೊಂದಿರುತ್ತದೆ. ಸಂಘವು 131.93 ಕೋಟಿ ರೂ. ಠೇವಣಿಯನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 13.36 ರಷ್ಟು ಹೆಚ್ಚಳವಾಗಿದೆ. ರೂ 109.74 ಕೋಟಿ ರೂ.ಗಳಷ್ಟು ಹೊರಬಾಕಿ ಸಾಲ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 20.67ರಷ್ಟು ಹೆಚ್ಚಳವಾಗಿದೆ. ಸಂಘವು 2.30 ಕೋಟಿ ರೂ ಗಳಷ್ಟು ಕ್ಷೇಮ ನಿಧಿ ಮತ್ತು 1.97 ಕೋಟಿ ರೂ ಗಳಷ್ಟು ಇತರ ನಿಧಿಗಳನ್ನು ಹೊಂದಿ ರೂ.138.89 ಕೋಟಿಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿದೆ. ಸ್ಥಾಪನೆಗೊಂಡ ವರ್ಷದಿಂದಲೇ ತನ್ನ ಸದಸ್ಯರಿಗೆ ಡಿವಿಡೆಂಡ್ ನೀಡಿಕೊಂಡು ಬರುತ್ತಿರುವ ಮತ್ತು ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ‘ಎ’ ತರಗತಿಯನ್ನು ಕಾಯ್ದುಕೊಂಡು ಬಂದಿರುವ ಏಕೈಕ ಸಂಘವಾಗಿರುತ್ತದೆ ಎಂದು ಸೀತರಾಮ ರೈ ಹೇಳಿದರು.

ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡವನ್ನು ಹೊಂದುವ ಉದ್ದೇಶದಿಂದ ಕಡಬ ತಾಲೂಕಿನ ಸವಣೂರು ಗ್ರಾಮದಲ್ಲಿ 75 ಸೆಂಟ್ಸ್ ನಿವೇಶವನ್ನು ಸಂಘದ ಹೆಸರಿನಲ್ಲಿ ಖರೀದಿಸಿದ್ದು, ಸದ್ರಿ ನಿವೇಶನದಲ್ಲಿ ನೂತನ ಕೇಂದ್ರ ಕಚೇರಿಯ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ 2024-25 ನೇ ಸಾಲಿನಲ್ಲಿ ಮಂಗಳೂರಿನಲ್ಲಿ ಹೊಸ ಶಾಖೆಯನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗಿದೆ. ಸಂಘದ ಪ್ರಗತಿ ಮತ್ತು ಸೇವೆಯನ್ನು ಪರಿಗಣಿಸಿ ಮಂಗಳೂರಿನಲ್ಲಿ ನಡೆದ 64 ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ‘ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿ ನೀಡಲಾಗಿರುತ್ತದೆ. ಮಾತ್ರವಲ್ಲದೆ ತನ್ನ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿದ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ 4 ಬಾರಿ ‘ಸಾಧನಾ ಪ್ರಶಸ್ತಿ’ ಪಡೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿರುತ್ತದೆ ಎಂದು ಸೀತರಾಮ ರೈ ತಿಳಿಸಿದರು.































 
 

ಸಂಘವು ತನ್ನ ಸಾಮಾಜಿಕ ಕಾರ್ಯದ ಮೂಲಕ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ 5ರಿಂದ 10ನೇ ತರಗತಿ ತನಕ ಕಲಿಯುತ್ತಿರುವ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ತನ್ನ ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆ ನಿಧಿಯಿಂದ ಧನಸಹಾಯವನ್ನು ಮಹಾಸಭೆಯ ದಿನದಂದು ನೀಡಿಕೊಂಡು ಬರುತ್ತಿದ್ದು, ಈವರೆಗೆ ಒಟ್ಟು ರೂ.21,73,000 ಮೊತ್ತವನ್ನು ಒಟ್ಟು 1,067 ವಿಧ್ಯಾರ್ಥಿಗಳಿಗೆ ಗಣ್ಯರ ಉಪಸ್ಥಿತಿಯಲ್ಲಿ ವಿತರಿಸುತ್ತೇವೆ ಮಾತ್ರವಲ್ಲದೇ ಹಲವಾರು ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ನೀಡಿರುತ್ತೇವೆ ಎಂದರು. ಸಂಘದಲ್ಲಿ ಗ್ರಾಹಕರಿಗೆ ತ್ವರಿತ ಮತ್ತು ಪಾರದರ್ಶಕ ಸೇವೆಯನ್ನು ನೀಡುವ ಸಲುವಾಗಿ ನೆಫ್ಟ್, ಆರ್.ಟಿ.ಜಿ.ಎಸ್ ಸೌಲಭ್ಯ, ಎಸ್.ಎಂ.ಎಸ್ ಸೌಲಭ್ಯಗಳನ್ನು ಒದಗಿಸಲಾಗಿದೆ ಹಾಗೂ ಸದಸ್ಯರಿಗೆ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ಲೈಟ್ ಅಳವಡಿಸಲು ಶೂನ್ಯ ಬಡ್ಡಿದರದಲ್ಲಿ ರೂ.2,00,000 ಸಾಲವನ್ನು ವಿತರಿಸಲಾಗುವುದು ಎಂದು ಅಧ್ಯಕ್ಷ ಸವಣೂರು ಕೆ.ಸೀತರಾಮ ರೈ ತಿಳಿಸಿದರು. ಸಂಘದ ಸಾಧನೆಗೆ ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರಿಗೆ, ಸಿಬ್ಬಂದಿ ವರ್ಗಕ್ಕೆ, ಎಲ್ಲಾ ವರ್ಗದ ಗ್ರಾಹಕರಿಗೆ ಅಧ್ಯಕ್ಷರು ಕೃತಜ್ಞತೆಯನ್ನು ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ಎನ್.ಸುಂದರ್ ರೈ, ನಿರ್ದೇಶಕರಾದ ಎನ್ ರಾಮಯ್ಯ ರೈ, ಜೈರಾಜ್ ಭಂಡಾರಿ, ಅಶ್ವಿನ್ ಎಲ್ ಶೆಟ್ಟಿ ಮತ್ತು ಮಹಾಪ್ರಬಂಧಕರಾದ ವಸಂತ ಜಾಲಾಡಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top