ಕಾರ್ಕಳ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರಿ ಸಂಸ್ಥೆ ಕಾರ್ಕಳದ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು 2023-24ನೇ ಸಾಲಿನಲ್ಲಿ ರೂ. 885.55 ಕೋಟಿ ವ್ಯವಹಾರ ನಡೆಸಿ ರೂ. 4.57 ಕೋಟಿ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಹೇಳಿದರು.
ಅವರು ಏ. 11 ರಂದು ಸೊಸೈಟಿಯ ಪ್ರಧಾನ ಕಛೇರಿ ಜೋಡುರಸ್ತೆಯ ಸಾರಸ್ವತ ಸೌಧದಲ್ಲಿ ನಡೆದ 2023-24ನೇ ಸಾಲಿನ ಆಯವ್ಯಯ ಪರಿಶೀಲನೆ ಹಾಗೂ 2024-25ನೇ ಸಾಲಿನ ಕ್ರಿಯಾಯೋಜನೆಯ ಕುರಿತು ನಿರ್ದೇಶಕ ಮಂಡಳಿ, ಶಾಖಾ ಸಲಹಾ ಸಮಿತಿ ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ನಡೆದ ವಿಚಾರವಿನಿಮಯ ಸಭೆಯಲ್ಲಿ ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ 28 ವರ್ಷಗಳ ಸಾರ್ಥಕ ಸೇವೆಯನ್ನು ನೀಡುತ್ತಿರುವ ಸಂಘವು ರೂ 4.59 ಕೋಟಿ ಪಾಲು ಬಂಡವಾಳ, ರೂ. 22.65 ಕೋಟಿ ಸ್ವಂತ ನಿಧಿ, ರೂ. 183.21 ಕೋಟಿ ಠೇವಣಿ ಹಾಗೂ ರೂ.150.21 ಕೋಟಿ ಸಾಲ ನೀಡಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿರುವುದು ಗ್ರಾಹಕರು ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ ಎಂದರು.
ಸೊಸೈಟಿಯು ಒಟ್ಟು 8 ಶಾಖೆಗಳನ್ನು ಹೊಂದಿದ್ದು ಈ ಪೈಕಿ ಕೇಂದ್ರ ಕಛೇರಿ ಹಾಗೂ 4 ಶಾಖೆಗಳು ಸಂಘದ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಪ್ರಧಾನ ಕಛೇರಿಗೆ ಹೊಂದಿಕೊಂಡಿರುವ ಸೊಸೈಟಿಯ ನಿವೇಶನದಲ್ಲಿ ನೂತನ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಇನ್ನು 1 ವರ್ಷದೊಳಗೆ ಭವ್ಯವಾದ ವಾಣಿಜ್ಯ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸುವ ಕಾರ್ಯಯೋಜನೆಯನ್ನು ಆಡಳಿತ ಮಂಡಳಿಯು ಹೊಂದಿದೆ ಎಂದರು.
ಸಂಘದ ಎಲ್ಲಾ ಶಾಖೆಗಳಲ್ಲೂ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಸ್ಟಾರ್ ಹೆಲ್ತ್ ಇನ್ಸುರೆನ್ಸ್ ಕಂಪೆನಿ ಒಡಂಬಡಿಕೆಯೊಂದಿಗೆ ವಿವಿಧ ರೀತಿಯ ಆರೋಗ್ಯ ವಿಮೆ, ಮಣಿಪಾಲ ಆರೋಗ್ಯಕಾರ್ಡ್, ಎಲ್ಲಾ ರೀತಿಯ ವಾಹನಗಳಿಗೆ ಸಾಮಾನ್ಯ ವಿಮೆ, ಉಚಿತ ಎಸ್.ಎಂ.ಎಸ್. ಸೌಲಭ್ಯ ನೀಡುವುದರ ಜೊತೆಗೆ ಇನ್ನು ಮುಂದೆ ಯಾವುದೇ ಬ್ಯಾಂಕ್ ಖಾತೆಯಿಂದ ನಮ್ಮ ಸಂಘದಲ್ಲಿ ಹೊಂದಿರುವ ಉಳಿತಾಯ ಖಾತೆಗೆ ನೇರವಾಗಿ ನಗದು ವರ್ಗಾವಣೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ Neft/ RTGS ಸೌಲಭ್ಯದ ಜೊತೆಗೆ ಇ ಸ್ಟಾಪಿಂಗ್ ಸೌಲಭ್ಯವನ್ನು ಈ ಆರ್ಥಿಕ ವರ್ಷದಿಂದಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಸಂಘವು ಕೇವಲ ಆರ್ಥಿಕ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿರದೇ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಶಿಕ್ಷಿತ ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ವಿಶೇಷವಾದ ಆದ್ಯತೆಯನ್ನು ನೀಡುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ಕಂಡ ಸರ್ವತೋಮುಖ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರ ಪಾತ್ರ ಮಹತ್ತರ ಎಂದರು.