ಅಯೋಧ್ಯೆ: ಅಯೋಧ್ಯೆಯ ಪ್ರಭು ಶ್ರೀರಾಮನಿಗೆ ಸುಮಾರು 151 ಕೆಜಿ ತೂಕದ ರಾಮಚರಿತ ಮಾನಸ ಪ್ರತಿಯನ್ನು 5 ಕೋಟಿ ಮೊತ್ತದಲ್ಲಿ ತಯಾರಿಸಿದ್ದು, ಇದಕ್ಕೆ ಏಳು ಕೆಜಿ ಚಿನ್ನದ ಲೇಪನ ಮಾಡಲಾಗಿದೆ.
ಬಾಲ ರಾಮನಿಗೆ 24 ಕ್ಯಾರೆಟ್ ಚಿನ್ನದ ರಾಮಾಯಣವನ್ನು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್ ಅವರು ಸಮರ್ಪಿಸಿದ್ದಾರೆ.24 ಕ್ಯಾರೆಟ್ ಚಿನ್ನದ ಲೇಪನದಿಂದ ಕೂಡಿರುವ ರಾಮಚರಿತ ಮಾನಸ 10,902 ಕಾವ್ಯಗಳನ್ನು ಒಳಗೊಂಡಿದೆ. ಈ ಚಿನ್ನದ ಕೃತಿಯಲ್ಲಿ ಸುಮಾರು 480 ರಿಂದ 500 ಪುಟಗಳು ಇವೆ ಎಂದು ಮೂಲಗಳು ತಿಳಿಸಿವೆ.
ಲಕ್ಷ್ಮೀನಾರಾಯಣ್ ಅವರು ತಮ್ಮ ಜೀವಮಾನದ ಉಳಿತಾಯವನ್ನು ಈ ಚಿನ್ನದ ರಾಮಚರಿತ ಮಾನಸ ಪುಸ್ತಕಕ್ಕೆ ನೀಡಿರುವುದಾಗಿ ತಿಳಿಸಿದ್ದಾರೆ. ಇನ್ನು ಈ ಪುಸ್ತಕವನ್ನು ತಯಾರಿಸಲು 140 ಕೆಜಿಯಷ್ಟು ತಾಮ್ರವನ್ನು ಸಹ ಬಳಸಿದ್ದಾರೆ, ಪ್ರಸ್ತುತ ಈ ಪುಸ್ತಕವನ್ನು ಶ್ರೀರಾಮನ ಗರ್ಭಗುಡಿಯಲ್ಲಿ ಇರಿಸಲಾಗಿದೆ. ಇನ್ನು ಮಂಗಳವಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ನವಮಿ ಆಚರಣೆ ಶುರುವಾಗಿದೆ. ಇನ್ನು ಅಲ್ಲಿನ ಇತರೆ ದೇವಾಲಯಗಳಲ್ಲಿ ರಾಮಲೀಲಾ, ರಾಮಕಥೆ, ರಾಮರಕ್ಷಾ ಸ್ತೋತ್ರ, ದುರ್ಗಾ ಸಪ್ತಶತಿ ಪಾರಣೆ ಮತ್ತು ಭಜನೆಗಳನ್ನು ಮಾಡಲಾಗುತ್ತಿದೆ. ರಾಮಚಂದ್ರ ನೆಲೆಸಿರುವ ಗರ್ಭಗುಡಿಯ ಭಾಗದಲ್ಲಿ ಬೆಳ್ಳಿಯ ಕಳಶವನ್ನು ಪ್ರತಿಷ್ಠಾಪಿಸುವ ಮೂಲಕ ರಾಮನವಮಿಗೆ ವಿದ್ಯುಕ್ತ ಚಾಲನೆ ದೊರೆತಿದೆ.