ಬೆಳ್ಳಾರೆ: ಬೆಳ್ಳಾರೆಯ ಗೌರಿಪುರಂ ಎಂಬಲ್ಲಿ ಶ್ರೀ ರಾಜರಾಜೇಶ್ವರಿ ಸಾನಿಧ್ಯವಿರುವ ಕ್ಷೇತ್ರದ ಪರಿಸರದಲ್ಲಿ ಪತ್ತೆಯಾದ ಕೆಲವು ಶಾಸನ ಇತ್ಯಾದಿ ಪರಿಕರ ಕುರುಹು ಗಳ ಪರಿಶೀಲನೆಗೆ ಶಾಸನ ತಜ್ಞರಾದ ಡಾ.ಉಮಾನಾಥ್ ಶೆಣೈ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.
ಪರಿಶೀಲನೆಯ ಸಮಯದಲ್ಲಿ ಪುರಾತನ ಕಾಲದಲ್ಲಿ ವೈಭವದಲ್ಲಿ ಮೆರೆದ ದೇವಸ್ಥಾನದ ಕುರುಹುಗಳು, ಪಾಣಿಪೀಠ, ಸೋಮಸೂತ್ರ, ಬಲಿಕಲ್ಲು, ಇತ್ಯಾದಿಗಳು ಪತ್ತೆಯಾಗಿವೆ. ಮಾತ್ರವಲ್ಲದೆ ವಿಶೇಷವಾಗಿ ದೇವಸ್ಥಾನವಿರುವ ಸ್ಥಳದಿಂದ ಸುಮಾರು 300 ಮೀಟರ್ ದೂರದ ದೇವರ ಜಳಕದ ಜಾಗ ಪರ್ತಿಕೆರೆ, ಕಾಸಾಗುವೆಲ್ ಗೌರಿ ಹೊಳೆಯಲ್ಲಿ ಬಂಡೆಕಲ್ಲಿನ ಮೇಲೆ ಮಹಿಳೆಯ ಹಾಗೂ ಹೂವಿನ ಚಿತ್ರಗಳು ಜೊತೆಯಲ್ಲಿ ಸ್ಪಷ್ಟವಾಗಿ ಗೋಚರವಾಗದ ಕೆಲವು ಚಿತ್ರಗಳು ಪತ್ತೆಯಾಗಿದೆ ಮಾತ್ರವಲ್ಲದೆ ದೇವಸ್ಥಾನದಿಂದ ಸುಮಾರು 600 ಮೀಟರ್ ದೂರದಲ್ಲಿ ಒಂದು ಶಿಲಾ ಕಂಬದ ಮೇಲೆ ವೀರಗಲ್ಲು ಹೋಲುವ ವಿಚಿತ್ರ ವೇಷ ಭೂಷಣಗಳ ಶಿಲಾಕೃತಿ ಪತ್ತೆಯಾಗಿದೆ.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪುರಾತನ ಶಾಸನಗಳನ್ನು ಅಧ್ಯಯನ ಮತ್ತು ಸಂರಕ್ಷಣೆ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ “ಶಾಸನ – ಶೋಧನ -ಅಧ್ಯಯನ -ಸಂರಕ್ಷಣಾ” ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡ ಪ್ರಥಮ ಯೋಜನೆ ಇದಾಗಿದೆ. ಈಗಾಗಲೇ 110ಕ್ಕೂ ಅಧಿಕ ಶಿಲಾ ಶಾಸನಗಳನ್ನು ಅಧ್ಯಯನ ಮಾಡಿದ ಶಾಸನ ತಜ್ಞರಾದ ಯೋಜನೆಯ ಪ್ರಮುಖ ಅಧ್ಯಯನಕಾರ ಡಾ. ಉಮಾನಾಥ ಶೆಣೈ ಅವರ ಪ್ರಕಾರ ಈ ಕ್ಷೇತ್ರದಲ್ಲಿ ಲಭ್ಯವಾದ ಐತಿಹಾಸಿಕ ಕುರುಹುಗಳ ಪ್ರಕಾರ ಈ ದೇವಸ್ಥಾನವು ಹೊಯ್ಸಳ ಸಾಮ್ರಾಜ್ಯ ದ ಎರಡು ಶತಮಾನಗಳ ಹಿಂದೆಯೇ ಈ ದೇವಾಲಯವು ನಿರ್ಮಾಣವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಹೆಚ್ಚಿನ ಅಧ್ಯಯನ ಹಾಗೂ ಉತ್ಖನನ ಮಾಡಿದ್ದಲ್ಲಿ ಇನ್ನು ಹೆಚ್ಚಿನ ವಿವರಗಳು ಲಭ್ಯವಾಗಬಹುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪುಸಾವಳಿಕೆ, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಕೋಶಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಕಾರ್ಯದರ್ಶಿ ರಾಮಕೃಷ್ಣ ಭಟ್ ಕುರುಂಬುಡೇಲು , ಜಗದೀಶ್ ರೈ ತಂಬಿನಮಕ್ಕಿ, ಪುರಂದರ ಗೌಡ ಸಪ್ತಗಿರಿ, ಮನು ತೊಂಡಚ್ಚನ್, ಕುಶಲಪ್ಪ ಗೌಡ ಮಣಿಮಜಲು, ನವೀನ್ ಕುಮಾರ್ ರೈ ತಂಬಿನಮಕ್ಕಿ, ರಮೇಶ್ ನಾಯಕ್ ಪೆನ್ನೆ, ಹರೀಶ್ ಕುಲಾಲ್ ಗೌರಿಪುರಂ, ನವೀನ್ ಕುಮಾರ್ ಗೌರಿಪುರಂ, ವಾಸುದೇವ ಗೌಡ ಗೌರಿಪುರಂ, ಪದ್ಮನಾಭ ಭಟ್, ರಮೇಶ್ ಪಡ್ಪು, ರಾಧಾಕೃಷ್ಣ ಕುಲಾಲ್ ಮಣಿಮಜಲು ಮುಂತಾದವರು ಉಪಸ್ಥಿತರಿದ್ದರು.