ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಮಿತಿ, ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಗೌಡ ಮಹಿಳಾ ಸಂಘ ಹಾಗೂ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದೊಂದಿಗೆ 2025ನೇ ಜನವರಿ 21 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯುವ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮ 2024-25 ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು.
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ, ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಸಮಾಜ ಕಟ್ಟಲು ಸಹಕಾರಿ ಸಂಘಗಳ ಪಾತ್ರ ಮಹತ್ವದ್ದು, ಈ ನಿಟ್ಟಿನಲ್ಲಿ 2002 ರಲ್ಲಿ ಸಹಕಾರಿ ಸಂಘದ ಸ್ಥಾಪನೆ ಮಾಡಲಾಗಿದ್ದು, ಸ್ಥಾಪನೆಯಾದ ವರ್ಷದಲ್ಲಿ ಸಂಘ ಕುಂಟುತ್ತಾ ಸಾಗಿದರೂ ಬಳಿಕದ ದಿನಗಳಲ್ಲಿ ಅಭಿವೃದ್ಧಿ ಕಂಡು ಹತ್ತು ಶಾಖೆಗಳ ಸ್ಥಾಪನೆಯಾಗಿ ಪ್ರಸ್ತುತ ವರ್ಷದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಚಿನ್ನದ ಪದಕ ಪಡೆಯುವಲ್ಲಿ ಸಂಘ ಬೆಳೆದಿದೆ. ಮುಂದೆ 11ನೇ ಶಾಖೆ ವಿಟ್ಲದಲ್ಲಿ ಆರಂಭಗೊಳ್ಳಲಿದೆ ಎಂದ ಅವರು, ಪ್ರಸ್ತುತ ಅಭಿವೃದ್ಧಿಗೆ ಪೂರಕ ಕೆಲಸಗಳನ್ನು ಸಂಘಗಳು ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಕೆಲಸ ಮಾಡುತ್ತಿದೆ ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ಮಾತೃ ಸಂಘ ಬೆಳೆಯಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ನಾಲ್ಕು ಚಕ್ರ ಜತೆಯಾಗಿ ಸಾಗಿದರೆ ಯಶಸ್ವಿ ಜತೆಗೆ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಎ.ವಿ.ನಾರಾಯಣ ಮಾತನಾಡಿ, ಸಮಾಜದಲ್ಲಿರುವ ಶೋಷಿತ ವರ್ಗದವರನ್ನು ಮೇಲೆತ್ತಲು ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕಾಗಿದೆ. ಮುಖ್ಯವಾಗಿ ಸಮುದಾಯದ ಜನರಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಕಾರ ಶಿಬಿರವನ್ನು ಹಮ್ಮಿಕೊಳ್ಳಬೇಕಾಗಿದೆ. ಇಂತಹಾ ಕಾರ್ಯಕ್ರಮಗಳನ್ನು ನಡೆಸಿದರೆ ಮುಂದಿನ ಪೀಳಿಗೆಗೆ ಅರಿವಿನ ಜತೆ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸಾಧ್ಯ ಎಂದ ಅವರು, ದಶಮಾನೋತ್ಸವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಎಕ್ಸಿಕ್ಯೂಟಿವ್ ಕಮಿಟಿಗಳನ್ನು ರಚಿಸಿ ಸಮಾಜಕ್ಕೆ ಮುಟ್ಟಿಸುವ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದರು.
ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನಿರ್ದೇಶಕ ವಸಂತ ವೀರಮಂಗಲ ದಶಮಾನೋತ್ಸವ ಅಂಗವಾಗಿ ಹೊರತರುವ ಸ್ಮರಣ ಸಂಚಿಕೆ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ, ಒಕ್ಕಲಿಗ ಸ್ಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ ಗೌಡ, ಪ್ರಧಾನ ಕಾರ್ಯದರ್ಶಿ ಪೂವಪ್ಪ ಗೌಡ ಸೂರ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಲೋಕನಾಥ ಗೌಡ ಕಾಡಮನೆ, ಲೋಕೇಶ್ ಚಾಕೋಟೆ, ಟ್ರಸ್ಟ್ ಮೆನೇಜರ್ ಸುನಿಲ್ ಕೆ.ಎಸ್., ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ ಕೆಯ್ಯೂರು, ನಿರ್ದೇಶಕ ಶ್ರೀಧರ ಗೌಡ ಕಣಜಾಲು, ವಿವಾಹ ವೇದಿಕೆ ಸಂಯೋಜಕ ಸುರೇಶ್ ಗೌಡ ಕಲ್ಲಾರೆ ಉಪಸ್ಥಿತರಿದ್ದರು.
ಮೇಲ್ವಿಚಾರಕ ವಿಜಯ ಕುಮಾರ್ ಗೌಡ ಕನ್ನಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.