ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರ ಕಾರ್ಯ ಎಲ್ಲೆಡೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಗನ್ ಸಹಿತ ವ್ಯಕ್ತಿಯೊಬ್ಬ ಬಂದು ಸಿಎಂಗೆ ಹಾರ ಹಾಕಿದ ಘಟನೆ ನಡೆದಿದೆ.
ರಿಯಾಜ್ ಎಂಬಾತ ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪರ ಸಿಎಂ ಮತಯಾಚನೆ ಮಾಡುತ್ತಿದ್ದರು. ಈ ವೇಳೆ ರಿಯಾಜ್ ಎಂಬ ವ್ಯಕ್ತಿಯು ತನ್ನ ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು, ಸಿಎಂ ಇದ್ದ ವಾಹನ ಏರಿದ್ದಾನೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದಾನೆ. ರಿಯಾಜ್ ನು ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, 5 ವರ್ಷಗಳ ಹಿಂದೆ ರಿಯಾಜ್ ಮೇಲೆ ಕೊಲೆ ಯತ್ನವಾದ ಬಳಿಕ ಗನ್ ಪರವಾನಿಗೆ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ.ಬೆಂಗಳೂರು ಆತನ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜ್, ರಿಯಾಜ್ ಕಾಂಗ್ರೆಸ್‌ನ ಕಾರ್ಯಕರ್ತ, ನಾಲ್ಕೈದು ವರ್ಷಗಳ ಹಿಂದೆ ಅವನ ಮೇಲೆ ಅಟ್ಯಾಕ್ ಆಗಿತ್ತು. ಇದರಿಂದ ಗನ್ ಲೈಸೆನ್ಸ್ ಪಡೆದುಕೊಂಡು, ಇಟ್ಟುಕೊಂಡಿದ್ದಾನೆ ಅನಿಸುತ್ತದೆ. ಅವನೇನು ರೌಡಿ ಅಲ್ಲ ಎಂದಿದ್ದಾರೆ.
ಇದು ಪೊಲೀಸ್ ಭದ್ರತಾ ವೈಫಲ್ಯನಾ? ಲೈಸೆನ್ಸ್ ಹೊಂದಿದ ವ್ಯಕ್ತಿ ಆದ್ರೂ, ಸಿಎಂ ಬಳಿ ಗನ್ ಇಟ್ಟುಕೊಂಡು ಹೋಗಬಹುದಾ? ಗನ್ ತಂದಿದ್ದ ವ್ಯಕ್ತಿಯನ್ನ ಪೊಲೀಸರು ಯಾಕೆ ಪರಿಶೀಲನೆ ಮಾಡಲಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.