ಬೆಂಗಳೂರು : ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ.
ಏ.14ರಂದು ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಒಂದು ದಿನದಲ್ಲಿ ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂದು ಬೆಂಗಳೂರಿಗೆ ಆಗಮಿಸಲಿರುವ ನರೇಂದ್ರ ಮೋದಿ ಮಧ್ಯಾಹ್ನ 3 ಗಂಟೆಗೆ ಡಾ ಕೆ ಸುಧಾಕರ್ ಪರ ಕ್ಷೇತ್ರ ಚಿಕ್ಕಬಳ್ಳಾಪುರ ಆಯೋಜಿಸಲಾದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶ ಮುಗಿದ ನಂತರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ ಶೋಭಾ ಕರಂದ್ಲಾಜೆ ಕ್ಷೇತ್ರವಾದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಬ್ಯಾಟರಾಯನಪುರ ಮತ್ತು ಹೆಬ್ಬಾಳ ಕ್ಷೇತ್ರ ಒಳಗೊಂಡಂತೆ ರೋಡ್ ಶೋವನ್ನು ಆಯೋಜನೆ ಮಾಡಲಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿಯು ಇಂದು ರೋಡ್ ಮ್ಯಾಪ್ ಅನ್ನು ಸಿದ್ಧಪಡಿಸಲಿದೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸಮಾವೇಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸುಧಾಕರ್, ಏಪ್ರಿಲ್ 14ರಂದು ರಾಜ್ಯದಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ದೇವನಹಳ್ಳಿ ಬಳಿ ಬಿಜೆಪಿ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು.
ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾದ ಬಳಿಕ ಮೊದಲ ಬಾರಿಗೆ ಮೊನ್ನೆ ಅಷ್ಟೇ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದರು. ಈ ವೇಳೆ ಬೆಂಗಳೂರಿನಲ್ಲಿ ವಿವಿಧ ಲೋಕಸಭಾ ಕ್ಷೇತ್ರಗಳ ನಾಯಕರ ಜೊತೆ ಸರಣಿ ಸಭೆಗಳನ್ನು ಮಾಡಿದ್ದರು. ಅಲ್ಲದೇ ಬಂಡಾಯ ಇರುವ ಕ್ಷೇತ್ರಗಳ ನಾಯಕರ ಸಭೆ ನಡೆಸಿ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಿದ್ದರು. ಅಲ್ಲದೇ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲಲು ರಾಜ್ಯ ಬಿಜೆಪಿ ನಾಯಕರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿ ದೆಹಲಿಗೆ ತೆರಳಿದ್ದರು.
ಇನ್ನು ದೆಹಲಿಗೆ ಹೋಗುವ ಮುನ್ನ ಅಮಿತ್ ಶಾ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚನ್ನಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಡಾ ಸಿ ಎನ್ ಮಂಜುನಾಥ್ ಪ್ರಚಾರ ಮಾಡಿ ಹೋಗಿದ್ದರು. ಇದಾದ ಬಳಿಕ ಇದೀಗ ರಾಜ್ಯಕ್ಕೆ ಮೋದಿ ಎಂಟ್ರಿ ಕೊಡುತ್ತಿದ್ದಾರೆ. ಇದು ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ ತಂದಿದೆ.