ಪುತ್ತೂರು: ಭಾರತ ಚುನಾವಣಾ ಆಯೋಗ ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭ ಎಲ್ಲಾ ಸಂಸ್ಥೆಗಳ ಸಿಬ್ಬಂದಿಗಳಿಗೆ ವೇತನ ಸಹಿತ ರಜೆಯನ್ನು ನೀಡಿದೆ. ಆ ದಿನದಂದು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಸುಕನ್ಯ ಹೇಳಿದರು.
ಅವರು ಸೋಮವಾರ ದ.ಕ.ಜಿಲ್ಲಾ ಸ್ವೀಪ್ ಸಮಿತಿ, ಪುತ್ತೂರು ತಾಲೂಕು ಸ್ವೀಪ್ ಸಮಿತಿ, ಕಾರ್ಮಿಕ ಇಲಾಖೆ ಪುತ್ತೂರು ಹಾಗೂ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಇದರ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಮ್ಮ ಸಹೋದ್ಯೋಗಿಗಳು ಹಾಗೂ ಮನೆಯವರೆಲ್ಲರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ವೋಟರ್ಸ್ ಹೆಲ್ಪ್ ಲೈನ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಿ ಎಂದು ಹೇಳಿದರು.
ಪುತ್ತೂರು ತಾಲೂಕು ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷ ಗಣಪತಿ ಹೆಗ್ಡೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಮಾತನಾಡಿ, ಪ್ರತಿಜ್ಞೆ ಸ್ವೀಕರಿಸಿದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ಇತರರಿಗೂ ಪ್ರೇರೇಪಿಸಬೇಕು ಎಂದರು.
ಈ ಸಂದರ್ಭ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ ಮ್ಯಾನೇಜರ್ ಗಳಾದ ಕೇಶವ ಪ್ರಸನ್ನ, ರಮೇಶ್ ಶೆಟ್ಟಿ, ತಾಲೂಕು ಸ್ವೀಪ್ ಕಾರ್ಯಕ್ರಮದ ಸಂಯೋಜಕಿ ತುಳಸಿ, ಫ್ಯಾಕ್ಟರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.