ಪುತ್ತೂರು: ಪ್ರಾಚೀನ ಕಾಲದ ಶಾಸನಗಳನ್ನು ಸಂರಕ್ಷಿಸುವ ಹಾಗೂ ಅದನ್ನು ಬೆಳಕಿಗೆ ತರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಪ್ರಾಚೀನ ಕನ್ನಡ ಶಾಸನಗಳ ಶೋಧನ ಅಧ್ಯಯನ ಮತ್ತು ಸಂರಕ್ಷಣಾ ಯೋಜನೆಗೆ ಶನಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ದೇವಸ್ಥಾನದ ಒಳಾಂಗಣದಲ್ಲಿ ಇರುವ 14ನೇ ಶತಮಾನದಲ್ಲಿ ವಿಜಯನಗರ ಅರಸರಿಂದ ಸ್ಥಾಪಿತ ಶಾಸನದ ಮುಂಭಾಗದಲ್ಲಿ ಮಾಹಿತಿ ಪತ್ರವನ್ನು ಅನಾವರಣಗೊಳಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಈವರೆಗೆ 110 ಪ್ರಾಚೀನ ಶಾಸನಗಳನ್ನು ಅಧ್ಯಯನ ಮಾಡಿ ಭಾರತೀಯ ಪ್ರಾಚೀನ ಸಂಸ್ಕೃತಿ, ಪರಂಪರೆ, ಜೀವನ ವಿಧಾನ ಮತ್ತು ಅಂದಿನ ಕನ್ನಡ ಸಾಹಿತ್ಯವನ್ನು ಬೆಳಕಿಗೆ ತಂದಿರುವ ಶಾಸನ ತಜ್ಞ ಡಾ. ಉಮಾನಾಥ್ ಶೆಣೈ ಅವರು ದೇವಸ್ಥಾನದಲ್ಲಿ ಇರುವ ಶಾಸನವನ್ನು ಓದಿ ತಿಳಿಸಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಯೋಜನೆಯ ವಿವರಗಳನ್ನು ತಿಳಿಸಿದರು. ಸಾಹಿತಿಗಳಾದ ಮಲ್ಲಿಕಾ ಜೆ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.