ಎಸ್‍ಸಿಡಿಸಿಸಿ ಬ್ಯಾಂಕ್ ಗೆ 79.09 ಕೋಟಿ ನಿವ್ವಳ ಲಾಭ | ಲಾಭದಲ್ಲಿ ಶೇ.29.04 ಏರಿಕೆ : ಪತ್ರಿಕಾಗೋಷ್ಠಿಯಲ್ಲಿ ಎಂ.ಎನ್‍.ರಾಜೇಂದ್ರ ಕುಮಾರ್

ಮಂಗಳೂರು: ಎಸ್‍ಸಿಡಿಸಿಸಿ ಬ್ಯಾಂಕ್ ಈ ಆರ್ಥಿಕ ವರ್ಷದಲ್ಲಿ ದಾಖಲೆಯ 79. 09 ಕೋಟಿ ರೂ. ಲಾಭ ಗಳಿಸಿದ್ದು, ಶೇ 29.04 ಏರಿಕೆ ಕಂಡಿದೆ. ಇದು ಬ್ಯಾಂಕ್‌ನ ಇತಿಹಾಸದಲ್ಲೇ ನೂತನ ದಾಖಲೆ ಆಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ಯಾಂಕ್ ಅಭಿವೃದ್ಧಿ ಮುಂಚೂಣಿಯಲ್ಲಿದ್ದು, 110 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 113 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದೆ. ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್ ಸಿಡಿಸಿಸಿ ಬ್ಯಾಂಕ್ ಈ ಬಾರಿ 15, 540.80 ಕೋಟಿ ರೂಪಾಯಿಗಳ ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ (ರೂ.13514.51 ಕೋಟಿ) ಈ ಬಾರಿ ಶೇ.14.99 ಏರಿಕೆ ಕಂಡಿದೆ. 2024-25ನೇ ಸಾಲಿಗೆ 18,000.00 ಕೋಟಿ ರೂ. ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದರು.

ಠೇವಣಿಗಳ ಸಂಗ್ರಹಣೆಯಲ್ಲಿ ಎಲ್ಲಾ ಬ್ಯಾಂಕ್ ಗಳಲ್ಲೂ ಸ್ಪರ್ಧೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೇ ಎಸ್ ಸಿಡಿಸಿಸಿ ಬ್ಯಾಂಕ್ 7221.37 ಕೋಟಿ ರೂ. ಠೇವಣಿ ಸಂಗ್ರಹಿಸಿ ಸಾಧನೆ ಮಾಡಿದೆ. ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗಿಂತ ಮುಂಚೂಣಿಯಲ್ಲಿ ಇದೆ. ಕಳೆದ ಸಾಲಿನ ಠೇವಣಿ ಸಂಗ್ರಹಣೆಗಿಂತ ಈ ಬಾರಿ ಶೇ 13.33 ಏರಿಕೆ ಯಾಗಿದೆ. ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬ್ಯಾಂಕ್ 6485.12 ಕೋಟಿ ರೂ. ಮುಂಗಡ ನೀಡಿದೆ. ಕೃಷಿಯೇತರ ಸಾಲಗಳ ಹೊರಬಾಕಿ 8319.43 ಕೋಟಿ ರೂ. ಆಗಿದೆ ಎಂದರು.



































 
 

29 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇ. 100 ರಷ್ಟು ಸಾಧನೆಯ ದಾಖಲೆ ನಿರ್ಮಿಸಿದೆ. ಇಂತಹ ಸಾಧನೆಯನ್ನು ಕಳೆದ 20 ವರ್ಷಗಳಿಂದ ಬ್ಯಾಂಕ್ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆ ಆಗಿದೆ. ಬ್ಯಾಂಕ್‌ಗೆ ಒಟ್ಟು 1072 ಸಂಘಗಳು ಸದಸ್ಯರಾಗಿದ್ದಾರೆ. ಇವುಗಳ ಪಾಲು ಬಂಡವಾಳ  403.59 ಕೋಟಿ ರೂ. ಆಗಿರುತ್ತದೆ. ದುಡಿವ ಬಂಡವಾಳ 11379.23 ಕೋಟಿ ರೂ. ಆಗಿದ್ದು, ಇದು ಕಳೆದ ವರ್ಷಕ್ಕಿಂತ (ರೂ.9930.69 ಕೋಟಿ) ಶೇ. 14.59 ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ 261.00 ಕೋಟಿ ರೂ. ವಿವಿಧ ನಿಧಿಗಳನ್ನು ಹೊಂದಿದೆ ಎಂದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ 1.37 ಲಕ್ಷ ರುಪೇ ಕಿಸಾನ್ ಕಾರ್ಡ್ ಗಳನ್ನು ರೈತರಿಗೆ ವಿತರಿಸಲಾಗಿದೆ. 80,668 ರುಪೇ ಡೆಬಿಟ್ ಕಾರ್ಡ್ ಗಳನ್ನು ಬ್ಯಾಂಕ್ ಇತರ ಗ್ರಾಹಕರಿಗೆ ನೀಡಲಾಗಿದೆ. 156063 ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡು ಮತ್ತು ಕಾರ್ಡ್ ದಾರರಿಗೆ ವೈಯುಕ್ತಿಕ ಅಪಘಾತ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಂಕ್ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡಿದೆ. ಬ್ಯಾಂಕ್ 19 ಶಾಖೆಗಳು ಸಂಪೂರ್ಣ ಹವಾನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಸುಸಜ್ಜಿತ ವಾಹನದಲ್ಲಿ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಯನ್ನು ಹಾಗೂ ಎಟಿಎಂ. ಸೌಲಭ್ಯವನ್ನು ಕಾರ್ಯರೂಪಕ್ಕೆ ತಂದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಇದೆ. ಬ್ಯಾಂಕ್ ಸಿಬ್ಬಂದಿಗೆ ಪಿಂಚಣಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ರಾಜ್ಯದ ಮೊದಲ ಕೇಂದ್ರ ಸಹಕಾರಿ ಬ್ಯಾಂಕ್ ಆಗಿದ್ದು, ಸಹಕಾರಿ ಕ್ಷೇತ್ರದಲ್ಲಿ ದುಡಿವ ಸಿಬ್ಬಂದಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ, ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (BBPS) ಯೋಜನೆ, ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಬ್ಯಾಂಕ್ ಆಡಳಿತ ಮಂಡಳಿ ನೂತನ ನಿರ್ದೇಶಕರುಗಳಾದ ವಿನಯ ಕುಮಾರ್ ಸೂರಿಂಜೆ, ಭಾಸ್ಕರ ಎಸ್. ಕೋಟ್ಯಾನ್, ಕೆ. ಹರಿಶ್ಚಂದ್ರ, ಟಿ.ಜಿ. ರಾಜರಾಮ ಭಟ್ ,ದೇವಿ ಪ್ರಸಾದ್ ಶೆಟ್ಟಿ, ಬಿ. ಅಶೋಕ್ ಕುಮಾರ್ ಶೆಟ್ಟಿ, ಶಶಿಕುಮಾರ್ ರೈ. ಬಿ. ಎಸ್. ರಾಜು ಪೂಜಾರಿ, ಎಂ.ವಾದಿರಾಜ ಶೆಟ್ಟಿ, ಕುಶಾಲಪ್ಪ ಗೌಡ, ಎಸ್.ಎನ್. ಮನ್ಮಥ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ ,ಎಸ್.ಬಿ. ಜಯರಾಮ ರೈ ,ಸದಾಶಿವ ಉಳ್ಳಾಲ ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಇದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top