ಪುತ್ತೂರು: ಕೃಷಿಕರಿಗೆ ಠೇವಣಾತಿಯಿಂದ ವಿನಾಯಿತಿ ಸಿಗದೇ ಹೋದರೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗುವುದು. ಕೋವಿಯನ್ನು ಮನೆಗೆ ತಂದುಕೊಡಬೇಕೆಂದು ನೋಟೀಸ್ ನೀಡುವ ಜತೆಗೆ ವ್ಯವಸ್ಥೆ ಮಾಡದಿದ್ದರೆ ನ್ಯಾಯಾಂಗ ನಿಧನೆ ಪ್ರಕರಣ ದಾಖಲಿಸಲಾಗುವುದು. ಕೋವಿ ಠೇವಣಿಯ ಸಂದರ್ಭದಲ್ಲಿ ಆಗಿರುವ ನಷ್ಟವನ್ನು ಅಧಿಕಾರಿಗಳ ಕೈಯಿಂದ ವಸೂಲಿಗೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,
ಚುನಾವಣಾ ಸಂದರ್ಭದಲ್ಲಿ ಕೋವಿ ಠೇವಣಾತಿಯ ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗ 2009ರಲ್ಲಿ ಸ್ಪಷ್ಟವಾದ ಮಾರ್ಗಸೂಚಿಯನ್ನು ನೀಡಿದೆ. ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಮೂರು ಬಾರಿ ಜಿಲ್ಲಾಡಳಿತ ಹಾಗೂ ಸ್ಕ್ರೀನಿಂಗ್ ಕಮಿಟಿಯನ್ನು ಬೇಡಿ ಮಾಡಿದ್ದರೂ, ಯಾವುದೇ ವಿನಾಯಿತಿಗೆ ಅವಕಾಶ ಇಲ್ಲ ಎಂಬ ಉತ್ತರ ಲಭಿಸಿದೆ. ಜಿಲ್ಲಾಡಳಿತ ರೈತರನ್ನು ಗುಲಾಮರನ್ನಾಗಿ ಮಾಡುವ ಎಲ್ಲಾ ಹುನ್ನಾರವನ್ನು ಮಾಡಿದೆ ಎಂದು ಆರೋಪಿಸಿದರು.
ಪ್ರಗತಿಪರ ಕೃಷಿಕ ಎಂ. ಗೋವಿಂದ ಭಟ್ ಮಾಣಿಮೂಲೆ ಮಾತನಾಡಿ, 2014 ರಿಂದ ಇಲ್ಲಿಯವರೆಗೆ ಯಾವುದೇ ಚುನಾವಣೆಯಲ್ಲಿ ಕೋವಿ ಠೇವಣಿ ಮಾಡಿಲ್ಲ ಮತ್ತು ನಾಲ್ಕು ಬಾರಿ ಈ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಲು ಹತ್ತಿದ್ದೇನೆ. ಚುನಾವಣಾ ಆಯೋಗದ ಆದೇಶದಲ್ಲಿ ಕೋವಿ ಪರವಾನಿಗೆ ಹೊಂದಿರುವ ವ್ಯಕ್ತಿ ಬೇಲ್ ನಲ್ಲಿ ಬಿಡುಗಡೆಯಾಗಿದ್ದರೆ, ಅಪರಾಧ ಹಿನ್ನಲೆಯುಳ್ಳವನಾಗಿದ್ದರೆ, ಚುನಾವಣಾ ಸಂದರ್ಭದಲ್ಲಿ ಗಲಭೆ ಸೃಷ್ಠಿಸಿದ್ದರೆ ಅಂತಹವರನ್ನು ಸ್ಕ್ರೀನಿಂಗ್ ಸಮಿತಿ ವಿಚಾರಣೆ ನಡೆಸಬೇಕೆಂದು ಹೇಳುತ್ತದೆ. ಸಮಿತಿ ಅರ್ಜಿಯನ್ನು ಪರಿಶೀಲನೆ ನಡೆಸದೇ ಸರಾ ಸಗಟಾಗಿ ತಿರಸ್ಕರಿಸುವ ಬದಲಾಗಿ ಆಯೋಗ ಹೇಳಿದಂತ ವ್ಯಕ್ತಿಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಬಹುದಲ್ಲಾ ಎಂದು ಪ್ರಶ್ನಿಸಿದ ಅವರು, ವಿನಾಯಿತಿ ಅರ್ಜಿಯನ್ನು ತಿರಸ್ಕೃತ ಆಗಿರುವ ವಿಚಾರವಾಗಲೀ, ನ್ಯಾಯಾಲಯದ ಆದೇಶದಂತೆ ವಿನಾಯಿತಿ ನೀಡಿದ ವಿಚಾರವನ್ನು ಅಧಿಕಾರಿಗಳು ತಿಳಿಸಬೇಕೆಂದು ಇದ್ದರೂ ಇದುವರೆಗೆ ಯಾರೊಬ್ಬರಿಗೂ ತಿಳಿಸಿರುವುದಿಲ್ಲ. ಠೇವಣಿ ಇಟ್ಟಿರುವ ಕೋವಿಯನ್ನು ಪ್ರದರ್ಶಿಸಿಬಾರದು ಎಂದ ಮೇಲೆ ಸಂಬಂಧಪಟ್ಟವರೇ ಮನೆಗೆ ತಂದು ಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಒಕ್ಕೂಟದ ಮುಖ್ಯಸ್ಥ ಸ್ಟೀವನ್ ಡಿಸೋಜ, ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಉಪಸ್ಥಿತರಿದ್ದರು.