ಸೌದಿ ಅರೇಬಿಯಾದಲ್ಲಿ ಉದ್ಯಮ ನಡೆಸುತ್ತಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ಕಳೆದ 9 ತಿಂಗಳಿನಿಂದ ಜೈಲು ಸೇರಿದ್ದು, ಅವರನ್ನು ಜೈಲಿನಿಂದ ಪಾರು ಮಾಡುವಂತೆ ಇದೀಗ ಕುಟುಂಬಸ್ಥರು ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.
ಮಂಗಳೂರಿನ ಜಪ್ಪಿನಮೊಗರು ನಿವಾಸಿ ಇಸ್ಮಾಯಿಲ್ ದಂಡರಕೋಲಿ (65) ಜೈಲು ಸೇರಿದವರಾಗಿದ್ದಾರೆ.
ಈ ತನಕ ಅವರನ್ನು ಜೈಲಿನಿಂದ ಪಾರು ಮಾಡಲು ಪ್ರಯತ್ನಿಸಿದರೂ ವಿಫಲವಾಗಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆಗೆ ಪತ್ರದ ಮೂಲಕ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಕಳೆದ 27 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯಮ ನಡೆಸುತ್ತಿದ್ದ ಅವರು 10 ವರ್ಷಗಳಿಂದ ರಿಯಾದ್ ನಲ್ಲಿ ಲಾಂಡ್ರಿ ಶಾಪ್ ನಡೆಸುತ್ತಿದ್ದರು. ಇದಕ್ಕಾಗಿ ಈಜಿಪ್ಟ್ ಪ್ರಜೆಯೊಬ್ಬರಲ್ಲಿ ಸಾಲ ಪಡೆದಿದ್ದರು. ಉದ್ಯಮದಲ್ಲಿ ನಷ್ಟಕ್ಕೊಳಗಾದರು. ಇದೀಗ ಹಣ ಪಡೆದು ವಂಚಿಸಿದ್ದಾರೆ ಎಂದು ಇಸ್ಮಾಯಿಲ್ ವಿರುದ್ಧ ಈಜಿಪ್ಟ್ ಪ್ರಜೆ ದೂರು ನೀಡಿದ್ದಾನೆ. ಈ ಹಿನ್ನಲೆಯಲ್ಲಿ ಸೌದಿ ಪೊಲೀಸರು ಇಸ್ಮಾಯಿಲ್ ಅವರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದಾರೆ ಎನ್ನಲಾಗಿದೆ.
ಇಸ್ಮಾಯಿಲ್ ಅವರು ತೀವ್ರ ಮಧುಮೇಹ ಮತ್ತು ಬಿಪಿಯಿಂದ ಬಳಲುತ್ತಿದ್ದು, ಜೈಲಿನಲ್ಲಿ ತೊಂದರೆಗೆ ಸಿಲುಕಿದ್ದಾರೆ ಎನ್ನಲಾಗಿದ್ದು, ಅವರ ಪುತ್ರಿ ವಿದೇಶಾಂಗ ಸಚಿವರಿಗೆ ಪತ್ರ ಬರೆದು ನೆರವು ಯಾಚಿಸಿದ್ದಾರೆ. ಇದೀಗ ಎಂಬೆಸ್ಸಿಯಿಂದ ಮನೆಯವರಿಗೆ ಫೋನ್ ಬಂದಿದ್ದು, ಬಿಡುಗಡೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.