ಮಂಡ್ಯ: ನಾನು ಈ ಬಾರಿ ಪಕ್ಷೇತರಳಾಗಿ ಸ್ಪರ್ಧೆ ಮಾಡುವುದಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ನಾನು ಬೆಂಬಲ ನೀಡುತ್ತೇನೆ. ಆದರೆ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ, ರಾಜಕೀಯ ಬಿಟ್ಟು ಹೋಗುವುದಿಲ್ಲ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಇಂದು ನಡೆದ ಬೆಂಬಲಿಗರ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಮೋದಿ ಅವರು ದೇಶದ ಬಗ್ಗೆ ಹೊಂದಿರುವ ಕನಸಿಗೆ ನಾವು ಬೆಂಬಲವಾಗಿ ನಿಲ್ಲಬೇಕು. ನನ್ನ ಎಂಪಿ ಸ್ಥಾನವನ್ನು ಬಿಟ್ಟು ಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೀನಿ ಎಂದು ಘೋಷಿಸಿದರು.
ಸಕ್ಕರೆ ನಾಡು ಮಂಡ್ಯ ಬಿಟ್ಟು ಬೇರೆ ಕಡೆ ನನ್ನ ರಾಜಕೀಯ ಜೀವನವಿಲ್ಲ, ಮಂಡ್ಯ ಮಣ್ಣಿನ ಸೊಸೆಯಾಗಿ ಜಿಲ್ಲೆಯ ಜನರ ಕೈಬಿಡಲು ನಾನು ಇಷ್ಟಪಡುವುದಿಲ್ಲ. ಈ ಮಂಡ್ಯದ ಋಣ ಮತ್ತು ಈ ಮಂಡ್ಯದ ಜನರನ್ನು ನಾನು ಎಂದೆಂದಿಗೂ ಬಿಡುವುದಿಲ್ಲ ಎಂದು ನಿಮ್ಮ ಮುಂದೆ ಇಂದು ಪ್ರಮಾಣ ಮಾಡಿ ಹೇಳುತ್ತೇನೆ ಎಂದರು.
ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ. ಗೌರವ ಇಲ್ಲದ ಕಡೆ ನಾನ್ಯಾಕೆ ಹೋಗಲಿ ಎಂದು ತಿರುಗೇಟು ನೀಡಿದ ಸುಮಲತಾ, ಕಳೆದ ಮೂರ್ನಾಲ್ಕು ತಿಂಗಳಿಂದ ಕೇಳಿ ಬರುತ್ತಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದರು.
ಈ ದೇಶದ ಭವಿಷ್ಯದ ಚುಕ್ಕಾಣಿ ಹಿಡಿಯುವಲ್ಲಿ ಪ್ರಧಾನಿ ಮೋದಿ ಸಮರ್ಥರು ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಮೋದಿಯವರು ಇಡೀ ವಿಶ್ವವೇ ಮೆಚ್ಚಿಕೊಂಡ ನಾಯಕ. ಅವರಲ್ಲಿ ಸ್ವಾರ್ಥ ರಾಜಕೀಯವಿಲ್ಲ, ಸ್ವತಂತ್ರ ಸಂಸದೆಯಾಗಿದ್ದ ನನಗೆ ಮಂಡ್ಯ ಜಿಲ್ಲೆಯ ಕೆಲಸ ಮಾಡಲು ಅನುದಾನ ಬಿಡುಗಡೆ ಮಾಡಲು ಬಿಜೆಪಿ ಸರ್ಕಾರ ಸಹಾಯ ಮಾಡಿದೆ. ಆದ್ದರಿಂದ ಬಿಜೆಪಿಗೆ ಸೇರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಏ.6 ರಂದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಘೋಷಿಸಿದರು