ಬೆಂಗಳೂರು: ತಾನು ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಮಾತುಗಳು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿ ಸಂಚಲನ ಸೃಷ್ಟಿಸಿದೆ.
ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ವರುಣ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಬೇಕು. ಅಷ್ಟು ಲೀಡ್ ಬಂದದ್ದೇ ಆದರೆ ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ಇರಬೇಕೋ, ಬೇಡೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ವರುಣ ಕ್ಷೇತ್ರದಲ್ಲಿ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿ ಮತಯಾಚಿಸಿದ್ದಾರೆ.
ಆದರೆ ಅದು ಅವರಿಗೇ ತಿರುಗುಬಾಣವಾಗಿ ಪರಿಣಮಿಸಿದೆ.
ಒಂದು ವೇಳೆ ವರುಣಾದಲ್ಲಿ ನಿರೀಕ್ಷಿಸಿದಷ್ಟು ಮತಗಳು ಸಿಗದಿದ್ದರೆ ಅಥವಾ ಅಭ್ಯರ್ಥಿ ಸೋತುಹೋದರೆ ಸಿದ್ದರಾಮಯ್ಯನವರ ಕುರ್ಚಿ ಉಳಿಯುವುದಿಲ್ಲ ಎಂದು ಬಿಜೆಪಿ ಟೀಕಿಸಿದೆ.
ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿರುವ ಸಿದ್ದರಾಮಯ್ಯ ಸೋಮವಾರದಿಂದ ತವರು ಜಿಲ್ಲೆಯಲ್ಲಿ ಮತ್ತೆ ಮೂರು ದಿನದ ಪ್ರವಾಸ ಆರಂಭಿಸಿದ್ದಾರೆ. ಸ್ಥಳೀಯ ಮುಖಂಡರ ಜತೆಗೆ ಮಾತುಕತೆ ನಡೆಸಿ, ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಚುನಾವಣಾ ತಂತ್ರಗಾರಿಕೆ ಚುರುಕುಗೊಳಿಸುತ್ತಿದ್ದಾರೆ. ಇದೇ ವೇಳೆ ಮೈಸೂರು ತಾಲೂಕಿನ ಬಿಳಿಗೆರೆ ಬೋರೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವರುಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಗಟ್ಟಿಯಾಗಿರಬೇಕಾದರೆ ಸುನೀಲ್ ಬೋಸ್‌ರನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.
ವರುಣದಲ್ಲಿ ನಾನು ಮತ್ತು ಸಚಿವ ಮಹದೇವಪ್ಪ ಅವರ ಪರಿಚಯ ಎಲ್ಲರಿಗೂ ಇದೆ. ನಾನು ಇಲ್ಲಿನ ಶಾಸಕ, ಯತೀಂದ್ರ ಇಲ್ಲಿನ ಮಾಜಿ ಶಾಸಕ. ನಾವು ಮೂವರು ಇಲ್ಲಿರುವಾಗ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಗೆ ಕನಿಷ್ಠ 60 ಸಾವಿರ ಲೀಡ್ ಆದರೂ ಸಿಗಬೇಕು ಎಂದು ಅವರು ಜನರೆದುರು ಹೇಳಿದ್ದಾರೆ.
ಒಂದು ವೇಳೆ ನೀವು ಕಾಂಗ್ರೆಸ್ ಅಭ್ಯರ್ಥಿಯನ್ನು ಅಷ್ಟು ಮತಗಳ ಅಂತರದಿಂದ ಗೆಲ್ಲಿಸಿದರೆ ನನಗೆ ಖುಷಿ. ಆಗ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದ ಅವರು, ನಾನು ಇರಬೇಕೋ, ಬೇಡೋ ಎಂದು ಸಭಿಕರನ್ನು ಕೇಳಿದ್ದಾರೆ. ನಾನು ಗಟ್ಟಿಯಾಗಿರಬೇಕೆಂದರೆ ನಮ್ಮ ಅಭ್ಯರ್ಥಿಗೆ 60 ಸಾವಿರ ಮತಗಳ ಲೀಡ್ ಕೊಡಿಸಿ. ಗೆದ್ದ ಬಳಿಕ ನಾನು ಮತ್ತೆ ನಿಮ್ಮಲ್ಲಿಗೆ ಧನ್ಯವಾದ ತಿಳಿಸಲು ಬರುತ್ತೇನೆ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಈ ಹೇಳಿಕೆ ಹಿನ್ನೆಲೆಯಲ್ಲಿ ಈ ಚುನಾವಣೆ ಸಿದ್ದರಾಮಯ್ಯನವರ ಅಳಿವು ಉಳಿವಿನ ಪ್ರಶ್ನೆಯೂ ಹೌದು ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ. ಸಿದ್ದರಾಮಯ್ಯಗೆ ಸೋಲಿನ ಭೀತಿ ಕಾಡುತ್ತಿದೆ. ತವರು ಜಿಲ್ಲೆಯ ಫಲಿತಾಂಶದ ಮೇಲೆ ಅವರ ಮುಖ್ಯಮಂತ್ರಿ ಕುರ್ಚಿಯ ಭವಿಷ್ಯ ನಿಂತಿದೆ. ತನ್ನ ಸ್ಥಾನಕ್ಕೆ ಗ್ಯಾರಂಟಿಯಿಲ್ಲ ಎಂದ ಮೇಲೆ ಅವರು ರಾಜ್ಯದ ಜನರಿಗೆ ಕೊಟ್ಟ ಗ್ಯಾರಂಟಿಗಳ ಬಗ್ಗೆ ಏನು ಗ್ಯಾರಂಟಿ ಇದೆ ಎಂದು ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯನವರನ್ನು ಇಳಿಸಲು ಈಗಲೂ ಒಳಗಿಂದೊಳಗೆ ಮಸಲತ್ತು ನಡೆಯುತ್ತಿದೆ ಎನ್ನುವುದನ್ನು ಅವರೇ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಯಾರೋ ಅವರನ್ನು ಹೆದರಿಸುತ್ತಿರುವುದು ಸ್ಪಷ್ಟ. ಇದು ಯಾರು ಎನ್ನುವುದು ಬಹಿರಂಗವಾಗಬೇಕಿದೆ ಎಂದು ಬಿಜೆಪಿ ಆಗ್ರಹಿಸಿದೆ.