ಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪುತ್ತೂರು ಚುನಾವಣಾ ಕಚೇರಿ ಪಕ್ಷದ ಕಚೇರಿ ಬಳಿ ಸೋಮವಾರ ಉದ್ಘಾಟನೆಗೊಂಡಿತು.
ಸಂಸದ ಹಾಗೂ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರೂ `ನನ್ನ ಮತಗಟ್ಟೆಯಲ್ಲಿ ಅತಿ ಹೆಚ್ಚು ಮತ ಗಳಿಸಿಕೊಡುತ್ತೇನೆ ಎಂಬ ಸಂಕಲ್ಪ ಮಾಡಬೇಕು. ದೇಶದ ದಿಕ್ಕಿನ ಬದಲಾವಣೆ, ಜಗದ್ವಂದ್ಯ ಭಾರತ ನಿರ್ಮಾಣಕ್ಕಾಗಿ ಈ ಚುನಾವಣೆ ನಡೆಯುತ್ತಿದೆ. ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಯುವ ನಾಯಕನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. 34 ವರ್ಷಗಳಿಂದ ದ.ಕ. ಕ್ಷೇತ್ರ ಬಿಜೆಪಿಯ ಕೈಯಲ್ಲಿದೆ. ಕಳೆದ ಬಾರಿ 2.70 ಲಕ್ಷ ಅಂತರದಿಂದ ಗೆಲುವಾಗಿದೆ. ಈ ಬಾರಿ 3.50 ಲಕ್ಷ ಮತಗಳ ಗೆಲುವು ನಮ್ಮದಾಗಲಿದೆ. ಪುತ್ತೂರಿನಲ್ಲಿ 50 ಸಾವಿರ ಮತಗಳ ಮುನ್ನಡೆ ಲಭಿಸಲಿದೆ ಎಂದು ನಳಿನ್ ಹೇಳಿದರು.
ತಾನು ಮೂರು ಬಾರಿ ಸಂಸದನಾಗಿದ್ದ ಅವಧಿಯಲ್ಲಿ ದೊಡ್ಡ ಪ್ರಮಾಣದ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ತಂದಿದ್ದೇನೆ. ಯುಪಿಎ ಸರಕಾರವಿದ್ದ ಆರಂಭಿಕ ಅವಧಿಯಲ್ಲಿ ೪೫೦೦ ಕೋಟಿ ಅನುದಾನ, ಬಳಿಕದ ೧೦ ವರ್ಷಗಳಲ್ಲಿ ೧ ಲಕ್ಷದ ೧೩ ಸಾವಿರ ಕೋಟಿ ಅನುದಾನ ಜಿಲ್ಲೆಗೆ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಆದ ಅಪೂರ್ವ ಅಭಿವೃದ್ಧಿ ಈ ಬಾರಿಯೂ ವರದಾನವಾಗಲಿದೆ ಎಂದು ಹೇಳಿದರು.
ಹಿರಿಯರು ಹಾಗೂ ಮಾಜಿ ಮಂಡಲ ಅಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ನನ್ಯ ಅಚ್ಯುತ ಮೂಡೆತ್ತಾಯ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಚುನಾವಣಾ ಪ್ರಭಾರಿ ಸುಲೋಚನಾ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಪಕ್ಷದ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಉಮೇಶ್ ಗೌಡ, ವಿವಿಧ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಗೌರಿ ಬನ್ನೂರು ವಂದೇ ಮಾತರಂ ಹಾಡಿದರು. ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಶಲ್ವ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.