ಮುಂಡಾಜೆ : ಸಾಕು ನಾಯಿಗಳಿಗೆ ವಿಷವಿಕ್ಕಿದ ಪರಿಣಾಮ 10 ಕ್ಕೂ ಅಧಿಕ ನಾಯಿಗಳು ಸಾವನ್ನಪ್ಪಿದ ಘಟನೆ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಶನಿವಾರ ರಾತ್ರಿ ಈ ರಸ್ತೆಯುದ್ದಕ್ಕೂ ಆಹಾರದಲ್ಲಿ ವಿಷವನ್ನು ಬೆರೆಸಿ ಅಲ್ಲಲ್ಲಿ ಎಸೆದು ಹೋಗಿದ್ದಾರೆ. ಇದನ್ನು ತಿಂದಿರುವ ನಾಯಿಗಳು ಸಾವನ್ನಪ್ಪಿದೆ ಎನ್ನಲಾಗಿದೆ.
ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರ ಗಮನಕ್ಕೆ ತಂದರು. ಪರಿಶೀಲನೆ ನಡೆಸಿದಾಗ ಕೆಲವು ಮನೆಗಳ ಅಂಗಳದಲ್ಲೂ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ.
ಬಳಿಕ ಸಾವನ್ನಪ್ಪಿದ ನಾಯಿಗಳನ್ನು ಪಂಚಾಯಿತಿ ವತಿಯಿಂದ ದಫನ ಮಾಡಲಾಯಿತು. ಈ ಘಟನೆ ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
























