ಕಡಬ: ಅಕ್ರಮ ದನ ಸಾಗಾಟದ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆಯನ್ನು ಖಂಡಿಸಿ ಆರೋಪಿಗಳ ಬಂಧನಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಕಡಬದ ಮರ್ದಾಳದ ನೆಕ್ಕಿತ್ತಡ್ಕ ಸಮೀಪ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಅವರು ರಾತ್ರಿ ವೇಳೆ ತನ್ನ ಕಾರನ್ನು ನಿಲ್ಲಿಸಿ ರಸ್ತೆ ದಾಟುತ್ತಿದ್ದ ಸಂದರ್ಭ ಸುಬ್ರಹ್ಮಣ್ಯ ಕಡೆಯಿಂದ ಬಂದ ಅಕ್ರಮ ದನ ಸಾಗಾಟದ ಮಾರುತಿ 800 ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಪರಿಣಾಮ ವಿಠಲ ರೈ ಅವರು ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಈ ಸಂದರ್ಭ ಆರೋಪಿಗಳು ಕಾರನ್ನು ದಿ.ರಶೀದ್ ಎಂಬವರ ಮನೆಯ ಮುಂಭಾಗ ನಿಲ್ಲಿಸಿ ದನವನ್ನು ಪಕ್ಕದ ತೋಟದಲ್ಲಿ ಕಟ್ಟಿ ಪರಾರಿಯಾಗಿದ್ದರು.
ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಷಯ ತಿಳಿದ ಹಿಂದೂ ಪರ ಸಂಘಟನೆಗಳು ರಾತ್ರಿಯೇ ಕಡಬಕ್ಕೆ ಆಗಮಿಸಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ಹೆದ್ದಾರಿ ತಡೆ ನಡೆಸಿ ಎಸ್ಪಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದರು. ಬಳಿಕ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತಿತರರು ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಸೇರಿಕೊಂಡರು.
ರಾತ್ರಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪ್ರತಿಭಟನಾಕಾರರ ಜತೆ ಮಾತನಾಡಿ ಆರೋಪಿಗಳನ್ನುಜ ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು ಎನ್ನಲಾಗಿದೆ.