ನೆಲ್ಯಾಡಿ: ಅಂಚೆ ಇಲಾಖೆಯಲ್ಲಿ 41 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನೆಲ್ಯಾಡಿ ಉಪ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿರುವ ಡಿ. ರಾಮಣ್ಣ ಶೆಟ್ಟಿ ಅವರು ಮಾ.31 ರಂದು ನಿವೃತ್ತಿಯಾಗಲಿದ್ದಾರೆ.
1983, ಮಾ.14 ರಂದು ಕೊಕ್ಕಡ ಅಂಚೆ ಕಚೇರಿಯಲ್ಲಿ ಇಲಾಖೇತರ ನೌಕರರಾಗಿ ಸೇವೆ ಆರಂಭಿಸಿದ ರಾಮಣ್ಣ ಶೆಟ್ಟಿಯವರು ಬಳಿಕ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1991, ನ.16 ರಂದು ಕಾರ್ಕಳ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ನೌಕರರಾಗಿ ಸೇವೆಗೆ ಸೇರ್ಪಡೆಗೊಂಡಿದ್ದರು. 1997, ಏ.26ರಂದು ಗ್ರೂಫ್ ಸಿ ನೌಕರರಾಗಿ ಪದೋನ್ನತಿ ಹೊಂದಿ ನೆಲ್ಯಾಡಿ ಉಪ ಅಂಚೆ ಕಚೇರಿಗೆ ವರ್ಗಾವಣೆಗೊಂಡು ಆಗಮಿಸಿದ್ದರು. ಬಳಿಕ ಗುತ್ತಿಗಾರು, ಕೊಕ್ಕಡ, ಮತ್ತೆ ನೆಲ್ಯಾಡಿ, ಕಡಬ, ಎಸ್ ಡಿ ಎಂ ಸಿ ಉಜಿರೆ, ಕೊಕ್ಕಡ, ಮಾಣಿ, ಪುತ್ತೂರು ಪ್ರಧಾನ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ 2020ರಲ್ಲಿ ಮತ್ತೆ ನೆಲ್ಯಾಡಿ ಉಪ ಅಂಚೆ ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಡಿ. ರಾಮಣ್ಣ ಶೆಟ್ಟಿ ಅವರು ಪತ್ನಿ ನಳಿನಿ ಆರ್. ಶೆಟ್ಟಿ, ಪುತ್ರರಾದ ವೋಕ್ಸ್ ವ್ಯಾಗನ್ ಕಂಪನಿಯ ಮಂಗಳೂರು ಕಚೇರಿ ವ್ಯವಸ್ಥಾಪಕ ಪ್ರಜ್ವಲ್ ಶೆಟ್ಟಿ, ಕೆನಡಾದಲ್ಲಿ ಉದ್ಯೋಗಿಯಾಗಿರುವ ಉಜ್ವಲ್ ಶೆಟ್ಟಿ ಹಾಗೂ ಸೊಸೆ ಭವಿಷ್ಯ ಪ್ರಜ್ವಲ್ ಶೆಟ್ಟಿಯವರೊಂದಿಗೆ ಕೌಕ್ರಾಡಿ ದೋಂತಿಲ ‘ ಮಾತೃಕೃಪಾ’ ದಲ್ಲಿ ವಾಸ್ತವ್ಯವಿದ್ದಾರೆ.