ಪುತ್ತೂರು : ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಶುಭ ಶುಕ್ರವಾರ (ಗುಡ್ ಫ್ರೈಡೇ) ದಿನವನ್ನು ಆಚರಿಸಲಾಯಿತು.

ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಯೇಸುವಿನ ಕಷ್ಟ ಮರಣದ ಕಥಾಪ್ರಸಂಗವನ್ನು ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ , ವಂದನೀಯ ಸ್ಟ್ಯಾನಿ ಪಿಂಟೋ, ವಂದನೀಯ ಅಶೋಕ್ ರಾಯನ್ ಕ್ರಾಸ್ತಾ ರವರು ರಾಗಭರಿತವಾಗಿ ಓದಿದರು. ವಂದನೀಯ ರೂಪೇಶ್ ತೌರೋ ರವರು ತಮ್ಮ ಪ್ರವಚನದಲ್ಲಿ ಶಿಲುಬೆಯ ಮಹತ್ವವನ್ನು ತಿಳಿಸುತ್ತಾ ಯೇಸುವಿನ ಶಿಲುಬೆಯೆ ನಮ್ಮ ಹಾದಿ ಮತ್ತು ನಮ್ಮ ಜೀವನ. ದೇವರು ತನ್ನ ಮನುಕುಲದ ರಕ್ಷಣೆಗೆ ಶಿಲುಬೆಯನ್ನು ತಮ್ಮ ಪುತ್ರ ಯೇಸುವಿನ ಮುಖಾಂತರ ನೀಡಿದರು. ನಮ್ಮ ಜೀವನದಲ್ಲಿ ಹಲವಾರು ಕಷ್ಟಗಳು, ರೋಗಗಳು, ಕೌಟುಂಬಿಕ ಸಮಸ್ಯೆಗಳೆಂಬ ಹಲವಾರು ಶಿಲುಬೆಗಳನ್ನು ಹೊರುತ್ತೇವೆ. ಈ ಸಂದರ್ಭದಲ್ಲಿ ಯೇಸುವಿನ ಮೇಲೆ ನಂಬಿಕೆ ಇಟ್ಟು ಜೀವನದಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು. ವಂದನಿಯ ಲಾರೆನ್ಸ್ ಮಸ್ಕರೇನಸ್ ರವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ತದನಂತರ ಇಡೀ ಪ್ರಪಂಚದಾದ್ಯಂತ ಕ್ಯಾಥೋಲಿಕ್ ಸಮುದಾಯವನ್ನು ನಡೆಸುವ ಪೋಪ್ ಫ್ರಾನ್ಸಿಸ್, ಬಿಷಪ್, ಹಾಗೂ ಎಲ್ಲಾ ಧಾರ್ಮಿಕ ಗುರುಗಳಿಗೆ, ಪ್ರಪಂಚದಾದ್ಯಂತ ದೇಶಗಳನ್ನು ನಡೆಸುವ ಮುಖಂಡರುಗಳಿಗೆ, ಯೇಸು ಕ್ರಿಸ್ತರನ್ನು ನಂಬಿ ಪೂಜಿಸುವ, ನಂಬಿಕೆ ಇಲ್ಲದ, ಪೂಜಿಸಿದ ಮಾನವರ ಒಳಿತಿಗೆ, ಇಡೀ ಮನುಜ ಕುಲಕ್ಕೆ ಒಳ್ಳೆಯದಾಗಲಿ, ಒಳ್ಳೆಯದನ್ನು ಮಾಡಲು ಆ ದೇವರು ಆಶೀರ್ವದಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಎಲ್ಲಾ ಭಕ್ತಾದಿಗಳಿಗೆ ಶಿಲುಬೆಯನ್ನು ಮುಟ್ಟಿ ನಮಸ್ಕರಿಸಲು ಅನುವು ಮಾಡಿ ಕೊಡಲಾಯಿತು. ಈ ಸಮಯದಲ್ಲಿ ಒಟ್ಟು ಗೂಡಿದ ಕಾಣಿಕೆ ಹಣವನ್ನು ರೋಗಿಗಳಿಗೆ ಮತ್ತು ಒಂದು ಹೊತ್ತು ಆಹಾರ ವಿಲ್ಲದ ಬಡಜನರಿಗೆ ಇರಿಸಲಾಯಿತು.
ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಭಕ್ತಾದಿಗಳು ಯೇಸುವಿನ ಪಾರ್ಥಿವ ಶರೀರವಿರುವ ತೊಟ್ಟಿಲು ಮತ್ತು ದುಃಖ ತಪ್ತ ಮೇರಿ ಮಾತೆಯ ವಿಗ್ರಹವನ್ನು ಚರ್ಚ್ ವಠಾರದಿಂದ ಎಮ್.ಟಿ ರಸ್ತೆಯ ಮೂಲಕ ಕೋರ್ಟ್ ರಸ್ತೆಯಾಗಿ ಚರ್ಚ್ ವಠಾರಕ್ಕೆ ತರಲಾಯಿತು. ತದನಂತರ ಭಕ್ತಾದಿಗಳಿಗೆ ವೀಕ್ಷಣೆಗೆ ಅನುವು ಮಾಡಿ ಕೊಟ್ಟು ತೊಟ್ಟಿಲಿಗೆ ಹಾಕಿದ ಹೂಗಳನ್ನು ಪ್ರತಿಯೊಬ್ಬ ಕ್ರೈಸ್ತ ಬಾಂಧವರು ಮನೆಗೆ ತೆಗೆದುಕೊಂಡು ಹೋಗಿ ಯೇಸಕ್ರಿಸ್ತರ ಕೃಪೆಗೆ ಪಾತ್ರರಾದರು.
ಚರ್ಚ್ ಪಾಲನಾ ಮಂಡಳಿಯ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಸುಸೂತ್ರವಾಗಿ ನೆರವೇರಲು ಸಹಕರಿಸಿದರು.